ಜೈಪುರ: ಚಲಿಸುತ್ತಿದ್ದ ರೈಲಿನಿಂದಲೇ ಯುವಕನೊಬ್ಬ ದಂಪತಿಯನ್ನು ತಳ್ಳಿ ಕೊಲೆ ಮಾಡಿರುವ ಅಘಾತಕಾರಿ ಘಟನೆಯೊಂದು ರಾಜಸ್ಥಾನದ ಜೈಪುರದ ಭರತ್ ಪುರ ಬಳಿ ನಡೆದಿದೆ.
ಜಗ್ಗು ಮತ್ತು ಶಕುಂತಲಾ ದಂಪತಿಯನ್ನು ಗೌರವ್ ಎಂಬಾತ ಚಲಿಸುತ್ತಿದ್ದ ರೈಲಿನಿಂದಲೇ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ಭಾನುವಾರ ನಡೆದಿದೆ.
ಘಟನೆ ವಿವರ:
ಅಲ್ವಾರ್ ನಿಂದ ಮಥುರಾ ಕಡೆಗೆ ಹೋಗುತ್ತಿದ್ದ ರೈಲಿನಿಂದ ಗೌರವ್ ಎಂಬಾತ ಈ ಕೊಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರಯಾಣಿಕರೊಬ್ಬರು ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ಗೌರವ್ ಅಲಿಯಾಸ್ ಸಾತೋ ಬಘೇಲ್, ಉತ್ತರ ಪ್ರದೇಶ ಕಸ್ಗಂಜಿಯ ಲಾವಾದ್ರನಾಗಿದ್ದಾನೆ. ಈತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾನೆ. ಕೆಲಸ ಹುಡುಕಲು ಮಥುರಾದಿಂದ ಅಲ್ವಾರ್ ಕಡೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಇದೇ ರೈಲಿಗೆ ಭರತ್‍ಪುರ ನಿವಾಸಿಗಳಾದ ಜಗ್ಗು ಮತ್ತು ಶಕುಂತಲಾ ದಂಪತಿ ದೀಗ್ ಎಂಬಲ್ಲಿ ರೈಲು ಹತ್ತಿದ್ದಾರೆ. ದಂಪತಿಯಿದ್ದ ರೈಲಿನ ಬೋಗಿಯಲ್ಲಿ ಆರೋಪಿ ಹಾಗೂ ಇನ್ನೋರ್ವ ಸೇರಿ ಒಟ್ಟು ನಾಲ್ವರೇ ಇದ್ದರು.
ದೀಗ್ ನಿಲ್ದಾಣದಲ್ಲಿ ರೈಲು ಹತ್ತಿದ ದಂಪತಿಗಳು, ಸ್ವಲ್ಪ ಸಮಯದ ನಂತರ ಊಟ ಮಾಡಲು ತಾವು ತಂದಿದ್ದ ಆಹಾರವನ್ನು ತೆರೆದಿಟ್ಟರು. ಈ ವೇಳೆ ಸಹಪ್ರಯಾಣಿಕನಾಗಿದ್ದ ಗೌರವ್ ತನಗೂ ನೀಡುವಂತೆ ಕೇಳಿದ್ದಾನೆ. ಹೀಗಾಗಿ ದಂಪತಿ ಆತನಿಗೆ ಎರಡು ರೊಟ್ಟಿಗಳನ್ನು ನೀಡಿದ್ದಾರೆ. ಎರಡಲ್ಲಿ ಒಂದು ರೊಟ್ಟಿಯನ್ನು ತಿಂದ ಗೌರವ್ ಇನ್ನೊಂದನ್ನು ಹೊರಗಡೆ ಎಸೆದಿದ್ದಾನೆ.
ಗೌರವ್ ನ ಈ ವರ್ತನೆ ದಂಪತಿಗೆ ಕೋಪ ತರಿಸಿತ್ತು. ಅಲ್ಲದೇ ಯಾಕೆ ಬಿಸಾಕಿದ್ದಿ, ನಾವು ವಾಪಸ್ ಬರೋವಾಗ ತಿನ್ನುತ್ತಿದ್ದೆವು ಅಲ್ವ ಅಂತ ಹೇಳಿದ್ದಾರೆ. ಈ ವೇಳೆ ದಂಪತಿ ಹಾಗೂ ಗೌರವ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರಿದ್ದು, ಗೌರವ್ ಪತಿ ಜಗ್ಗುವನ್ನು ಚಲಿಸುತ್ತಿದ್ದ ರೈಲಿನಿಂದಲೇ ಹೊರದಬ್ಬಿದ್ದಾನೆ. ಘಟನೆಯನ್ನರಿತ ಪತ್ನಿ ಕಿರುಚಾಡಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಗೌರವ್, ಪತ್ನಿ ಶಕುಂತಲಾ ಅವರನ್ನು ಕೂಡ ರೈಲಿನಿಂದ ನೂಕಿದ್ದಾನೆ.
ಈ ಎಲ್ಲಾ ಘಟನೆಗಳನ್ನು ಕಣ್ಣಾರೆ ನೋಡಿದ ಮತ್ತೋರ್ವ ಪ್ರಯಾಣಿಕ ಇವರ ಮಧ್ಯೆ ಬಂದು ಜಗಳ ಬಿಡಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಗೌರವ್ ತನ್ನ ಮೇಲೆಯೂ ಹಲ್ಲೆ ನಡೆಸಬಹುದು ಎಂದು ಭಯಭೀತನಾಗಿ, ಮುಂದಿನ ನಗರ್ ನಿಲ್ದಾಣದಲ್ಲಿ ಇಳಿದು ರೈಲ್ವೆ ಸಿಬ್ಬಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ.
ಕೂಡಲೇ ಎಚ್ಚೆತ್ತ ರೈಲ್ವೇ ಸಿಬ್ಬಂದಿ ಆರೋಪಿ ಗೌರವ್ ನನ್ನು ಬಂಧಿಸಿದ್ದಾರೆ. ಮೊದಲು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ ಬಳಿಕ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.