Connect with us

Latest

225 ಮೊಬೈಲ್ ಬುಕ್ಕಿಂಗ್, 166 ಬಾರಿ ರಿಫಂಡ್: 52 ಲಕ್ಷ ವಂಚಿಸಿದ್ದ ಕಳ್ಳ ಒಂದು ತಪ್ಪಿನಿಂದ ಸಿಕ್ಕಿಬಿದ್ದ!

Published

on

ನವದೆಹಲಿ: ಆನ್‍ಲೈನ್ ನಲ್ಲಿ ಮೊಬೈಲ್ ಬುಕ್ ಮಾಡಿ, ಫೋನ್ ಬಂದಿಲ್ಲ ಎಂದು ಹೇಳಿ ಇ-ಕಾಮರ್ಸ್ ಕಂಪನಿಯೊಂದಕ್ಕೆ ಸುಮಾರು 52 ಲಕ್ಷ ರೂ. ವಂಚಿಸಿದ್ದ ಯುವಕನನ್ನು ಮಂಗಳವಾರ ದೆಹಲಿಯ ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಶಿವಂ ಚೋಪ್ರಾ ಬಂಧಿತ ಆರೋಪಿ. ಹೋಟೆಲ್ ಮ್ಯಾನೇಜಮೆಂಟ್ ಪದವಿಧರನಾಗಿರುವ ಶಿವಂ ಇದೂವರೆಗೂ ದುಬಾರಿ ಬೆಲೆಯ 225 ಮೊಬೈಲ್ ಗಳನ್ನು ಬುಕ್ ಮಾಡಿ, 166 ಬಾರಿ ಕಂಪನಿಗಳಿಂದ ಮರಳಿ ಹಣ ಪಡೆದಿದ್ದಾನೆ. ಇನ್ನೂ ಆನ್‍ಲೈನ್ ನಲ್ಲಿ ಬುಕ್ ಮಾಡಿಕೊಂಡಿರುವ ಎಲ್ಲ ಮೊಬೈಲ್ ಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾನೆ.

ಉತ್ತರ ದೆಹಲಿಯ ತ್ರಿ ನಗರದ ನಿವಾಸಿಯಾಗಿರುವ ಶಿವಂ ಸದ್ಯ ನಿರುದ್ಯೋಗಿಯಾಗಿದ್ದು, ಈ ಹಿಂದೆ ಹೋಟೆಲ್ ಗಳಲ್ಲಿ ಕೆಲವು ದಿನ ಕೆಲಸ ಮಾಡಿಕೊಂಡಿದ್ದ. ಕಳೆದ ವಾರ ಆನ್‍ಲೈನ್ ಚೀಟಿಂಗ್ ಸಂಬಂಧಿಸಿದಂತೆ ಶಿವಂ ಬಗ್ಗೆ ಇ-ಕಾಮರ್ಸ್ ಕಂಪನಿಯೊಂದು ತನ್ನ ಆಂತರಿಕ ತನಿಖೆಯ ಅನ್ವಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

141 ಸಿಮ್ ಕಾರ್ಡ್ ಹೊಂದಿದ್ದ: ಶಿವಂ ತನಗೆ ಪರಿಚಯವಿರುವ ಮೊಬೈಲ್ ಅಂಗಡಿ ಮಾಲೀಕ ಸಚಿನ್ ಜೈನ್ ಎಂಬಾತನಿಂದ 141 ಸಿಮ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದ. ಈ ನಂಬರ್ ಗಳಿಂದ 50ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಂಡಿದ್ದನು. ಆದರೆ ಯಾವುದೇ ಸಿಮ್ ಗಳಿಗೆ ತನ್ನ ಅಧಿಕೃತ ದಾಖಲೆಗಳನ್ನು ನೀಡಿ, ಖರೀದಿಸಿಲ್ಲ. ಎಲ್ಲ ಸಿಮ್ ಗಳಿಗೂ ಸಚಿನ್ ನಕಲಿ ದಾಖಲೆಗಳನ್ನು ನೀಡಿದ್ದ. ನಕಲಿ ಸಿಮ್ ನಂಬರ್ ಮತ್ತು ಮೇಲ್ ಐಡಿಗಳಿಂದ ಆನ್‍ಲೈನ್ ಶಾಪಿಂಗ್ ಅಕೌಂಟ್ ಓಪನ್ ಮಾಡಿ, ಅವುಗಳ ಮೂಲಕವೇ ಶಿವಂ ವ್ಯವಹಾರ ಮಾಡುತ್ತಿದ್ದನು ಎಂದು ಡಿಸಿಪಿ ಮಿಲಿಂದ್ ದುಂಬೆರೆ ಹೇಳಿದ್ದಾರೆ.

ಅಡ್ರೆಸ್ ಹೇಳುತ್ತಿರಲಿಲ್ಲ: ಆನ್‍ಲೈನ್ ನಲ್ಲಿ ಮೊಬೈಲ್ ಗಳನ್ನು ಬುಕ್ ಮಾಡಿದ ಶಿವಂ, ಡೆಲಿವರಿ ಅಡ್ರೆಸ್ ಸರಿಯಾಗಿ ಹೇಳುತ್ತಿರಲಿಲ್ಲ. ಡೆಲಿವರಿ ಬಾಯ್ ಗಳು ಕರೆ ಮಾಡಿದಾಗ ಪ್ರತಿಬಾರಿಯೂ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಗಳನ್ನು ಪಡೆದುಕೊಳ್ಳುತ್ತಿದ್ದನು.

ಮೊಬೈಲ್ ಬಂದ ಕೂಡಲೇ ಕಂಪನಿಗೆ ಕರೆ ಮಾಡಿ ಖಾಲಿ ಡಬ್ಬ ಮಾತ್ರ ಬಂದಿದೆ ಎಂದು ಹೇಳುತ್ತಿದ್ದನು. ಗ್ರಾಹಕರ ಹಿತಾಸಕ್ತಿಗಾಗಿ ಕಂಪನಿ ಶಿವಂನಿಗೆ ಮೊಬೈಲ್ ಗೆ ನೀಡಿದ ಹಣದೊಂದಿಗೆ ಗಿಫ್ಟ್ ವೋಚರ್ ಸಹ ನೀಡುತ್ತಿದ್ದರು. ಶುಭಂ ಎಂಬ ಹೆಸರಿನ ಮೂಲಕ ಆನ್‍ಲೈನ್ ವ್ಯವಹಾರ ನಡೆಸುತ್ತಿದ್ದನು.

ಕೆಲವು ತಪ್ಪು ಮಾಡಿದ್ದ: ಶಿವಂ ತನ್ನ ವ್ಯವಹಾರದಲ್ಲಿ ಕೆಲವು ತಪ್ಪಗಳನ್ನು ಮಾಡಿದ್ದ, ಪ್ರತಿಬಾರಿಯೂ ಶಾಪಿಂಗ್ ಮಾಡುವಾಗ ಶುಭಂ ಎಂಬ ಹೆಸರನ್ನು ಹೇಳುತ್ತಿದ್ದನು. ಮೊಬೈಲ್‍ಗಳು ಪ್ರತಿಬಾರಿಯೂ ದೆಹಲಿಯ ತ್ರಿನಗರದಿಂದಲೇ ಬುಕ್ ಮಾಡಲಾಗುತ್ತಿತ್ತು ಹಾಗೂ ಮೂವರು ಡೆಲಿವರಿ ಬಾಯ್ ಗಳು ಈತನನ್ನು ಗುರುತಿಸಿದ್ದರು. ಇದರಿಂದ ಅನುಮಾನಗೊಂಡ ಕಂಪನಿ ಈ ಸಂಬಂಧ ವಾಯುವ್ಯ ದೆಹಲಿಯ ಶಾಲಿಮಾರ್ ಭಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ದೂರು ದಾಖಲಾದ ಬಳಿಕ ಪೊಲೀಸರು ಆರೋಪಿ ಶಿವಂ ಚೋಪ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಎನ್ನುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Click to comment

Leave a Reply

Your email address will not be published. Required fields are marked *