ನವದೆಹಲಿ: ಆರ್ಡರ್ ಮಾಡಿದ್ದ ಊಟಕ್ಕಾಗಿ ಕಾಯ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನವದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ.
ಅಮಿತ್ ಕೋಚರ್ ಕೊಲೆಯಾದ ವ್ಯಕ್ತಿ. ಅಮಿತ್ ತನ್ನ ಸ್ನೇಹಿತರ ಜೊತೆ ಮನೆಯಲ್ಲಿ ಕಾಲ ಕಳೆಯುತ್ತಿದ್ದನು. ಈ ವೇಳೆ ಅವರು ತನ್ನ ಮೊಬೈಲ್ ಆ್ಯಪ್‍ನಲ್ಲಿ ಊಟವನ್ನು ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಡೋರ್ ಬೆಲ್ ಆಗಿದೆ.
ಡೆಲಿವರಿ ಬಾಯ್ ಎಂದು ತಿಳಿದು ಅಮಿತ್ ಬಾಗಿಲು ತೆಗೆದಿದ್ದಾರೆ. ಆದರೆ ದುಷ್ಕರ್ಮಿಗಳು ಮೊದಲು ಮಾತನಾಡುವುದಾಗಿ ಹೇಳಿ ಅಮಿತ್‍ನನ್ನು ಕಾರಿನ ಬಳಿ ಕರೆದುಕೊಂಡು ಹೋದರು. ಬಳಿಕ ನಿರಂತರವಾಗಿ ಗುಂಡು ಹಾರಿಸಿದ್ದಾರೆ. ಪರಿಣಾಮ ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಿನ ಸದ್ದು ಕೇಳಿ ಅಮಿತ್ ಸ್ನೇಹಿತರು ಸ್ಥಳಕ್ಕೆ ಓಡಿ ಬಂದು ಸಹಾಯ ಮಾಡಲು ಮುಂದಾದರು. ಈ ವೇಳೆ ದುಷ್ಕರ್ಮಿಗಳು ಗನ್ ತೋರಿಸಿ ಈ ವಿಷಯದಿಂದ ದೂರ ಇರಿ ಎಂದು ಅಮಿತ್ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾರೆ.
ಅಮಿತ್ ಪತ್ನಿ ಗುರುಗ್ರಾಮದ ಕಾಲ್ ಸೆಂಟರ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ನಡೆದಾಗ ಅಮಿತ್ ಪತ್ನಿ ಕೆಲಸಕ್ಕೆ ಹೋಗಿದ್ದರು. ಅಮಿತ್ ಕೂಡ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು.