ಮುಂಬೈ: ಹಣದ ಆಸೆಗೆ ವೇಶ್ಯಾವಾಟಿಕೆ ದಂಧೆಯಲ್ಲಿ ಮುಳುಗಿದ್ದ ಪತ್ನಿಯನ್ನು ಹೊರತರಲು ಮುಂದಾದ ಪತಿಯೇ ಹೆಣವಾದ ಅಮಾನವೀಯ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ತನ್ನ ವೇಶ್ಯಾವಾಟಿಕೆ ದಂಧೆಯನ್ನು ತಡೆಯಲು ಮುಂದಾದ ಪತಿಗೆ ಪತ್ನಿಯೇ ಸಹೋದರನ ಜೊತೆ ಸೇರಿ ಕೊಲೆಗೈದಿದ್ದಾಳೆ. ಪೊಲೀಸ್ ಮಾಹಿತಿ ಪ್ರಕಾರ, 35 ವರ್ಷದ ಮೃತ ವ್ಯಕ್ತಿಗೆ ಆತನ ಪತ್ನಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಳೆಂಬುದು ಗೊತ್ತಾಗಿದೆ. ಆಗ ಆತ ಹೇಗಾದರೂ ಪತ್ನಿಯ ಈ ಅಕ್ರಮ ವವ್ಯಹಾರಕ್ಕೆ ಬ್ರೇಕ್ ಹಾಕಬೇಕು ಎಂದು ನಿರ್ಧರಿಸಿ, ಪತ್ನಿ ನಡೆಸುತ್ತಿದ್ದ ವೇಶ್ಯಾವಾಟಿಕೆಯನ್ನು ತಡೆಯಲು ಯತ್ನಿಸಿದ್ದಾನೆ.
ಹಣದ ಹುಚ್ಚು ಹಿಡಿದಿದ್ದ ಪತ್ನಿ ಮಾತ್ರ ಯಾವುದೇ ಕಾರಣಕ್ಕೂ ದಂಧೆ ಬಿಡಲು ಮನಸ್ಸು ಮಾಡಲಿಲ್ಲ. ಪತಿಯ ಮಾತಿಗೆ ಕ್ಯಾರೆ ಅನ್ನದೇ ತನ್ನ ಪಾಡಿಗೆ ತಾನು ದಂಧೆಯಲ್ಲಿ ಮುಳುಗಿದ್ದಳು. ಇದೇ ವಿಚಾರಕ್ಕೆ ದಂಪತಿ ಮಧ್ಯೆ ಹಲವು ಬಾರಿ ಗಲಾಟೆ ಕೂಡ ನಡೆದಿದೆ. ಹೀಗಾಗಿಯೂ ಕೂಡ ಪತ್ನಿ ಮಾತ್ರ ಹಣಕ್ಕಾಗಿ ವೇಶ್ಯಾವಾಟಿಕೆ ಮಾಡುವುದನ್ನು ಮುಂದುವರಿಸಿದ್ದಳು.
ಪದೇ ಪದೇ ತನ್ನ ದಂಧೆಗೆ ಅಡ್ಡಿ ಪಡಿಸುತ್ತಿದ್ದ ಪತಿಗೆ ಒಂದು ಗತಿ ಕಾಣಿಸಬೇಕೆಂದು ಪತ್ನಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾಳೆ. ಆಗ ಪತ್ನಿ, ಆಕೆಯ ಸಹೋದರ ಜೊತೆಗೆ ಇನ್ನೂ ಮೂವರು ಸಾಥ್ ನೀಡಿದ್ದು, ಪತಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ.
ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ 5 ಮಂದಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.