– ಕೊಲೆಗೆ ಜೀವಾವಧಿ, ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ
ತಿರುವನಂತಪುರಂ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ಮೃತ ವ್ಯಕ್ತಿಯ ಪತ್ನಿಯನ್ನು ಅತ್ಯಾಚಾರ ಮಾಡಿದ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ಕೇರಳದ ಸ್ಥಳೀಯ ನ್ಯಾಯಾಲಯವು ವಿಧಿಸಿದೆ.
ಅಪರಾಧಿಗಳಾದ ಅನಿಲ್ ಕುಮಾರ್ ಮತ್ತು ಚಂದ್ರಶೇಖರನ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಮಿನಿ ಎಸ್.ದಾಸ್ ಅವರು ಶಿಕ್ಷೆ ಜೊತೆಗೆ 1 ಲಕ್ಷ ಮತ್ತು 1.75 ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಈ ಘಟನೆ 2017ರಲ್ಲಿ ನಡೆದಿದ್ದು, ಈಗ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ. ಕೋವಲಂ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಕೊಲಿಯೂರ್ ನಲ್ಲಿ ಈ ಘಟನೆ ನಡೆದಿತ್ತು. ಕೋರ್ಟ್ ಅಪರಾಧಿ ಅನಿಲ್ ಕುಮಾರ್ ಗೆ ಮರಣ ದಂಡನೆ ಮತ್ತು ಎರಡನೇ ಅಪರಾಧಿ ಚಂದ್ರಶೇಖರನ್‍ಗೆ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಕೊಲಿಯೂರು ಪ್ರದೇಶದಲ್ಲಿ ದಂಪತಿ ತಮ್ಮ ನಿವಾಸದಲ್ಲಿ ಮಲಗಿದ್ದರು. ಆಗ ಈ ಇಬ್ಬರು ಅಪರಾಧಿಗಳು ಮನೆಗೆ ನುಗ್ಗಿ ಇದ್ದಕ್ಕಿದ್ದಂತೆ ಸುತ್ತಿಗೆ ಮತ್ತು ಕಬ್ಬಿಣದ ರಾಡ್‍ನಿಂದ ದಂಪತಿಯ ಮೇಲೆ ದಾಳಿ ಮಾಡಿದ್ದಾರೆ. ಚಂದ್ರಶೇಖರನ್ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯೂ ಕೂಡ ಅಪರಾಧಿಗಳ ಮೇಲೆ ಅದೇ ರೀತಿಯ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ್ದಾರೆ. ಆದರೆ ಆರೋಪಿ ಅನಿಲ್ ಆಕೆಗೆ ಕಬ್ಬಿಣದ ರಾಡ್‍ನಿಂದ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಯನ್ನು ಅತ್ಯಾಚಾರ ಮಾಡಿದ್ದಾನೆ. ಬಳಿಕ ಅನಿಲ್, ಚಂದ್ರಶೇಖರನ್ ಮನೆಯಲ್ಲಿ ಇದ್ದ ಹಣ, ಚಿನ್ನ ಮತ್ತು ಮೌಲ್ಯವಾದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಇತ್ತ ಸಂತ್ರಸ್ತೆಯ ಮೆದುಳಿಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಕೋಮಾಗೆ ಹೋಗಿದ್ದರು. ಇತ್ತೀಚೆಗೆ ಮಹಿಳೆಗೆ ಪ್ರಜ್ಞೆ ಬಂದಿದೆ. ಆದರೆ ಹಳೆಯ ನೆನಪುಗಳನ್ನು ಕಳೆದುಕೊಂಡಿದ್ದರು. ಅಪರಾಧಿಗಳು ಮನೆ ದೋಚಿ ಹೋದ ಕೆಲವು ಗಂಟೆಗಳ ನಂತರ ರೂಮಿನಲ್ಲಿ ಮಲಗಿದ್ದ ಮೃತರ ಮಕ್ಕಳು ಎಚ್ಚರಗೊಂಡಿದ್ದಾರೆ. ನಂತರ ಈ ಘಟನೆ ಬೆಳಕಿಗೆ ಬಂದಿತ್ತು. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್‍ಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ಇರಲಿಲ್ಲ. ಆದ್ದರಿಂದ ಸಾಂದರ್ಭಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅನಿಲ್ ಕುಮಾರ್ ಸಂತ್ರಸ್ತೆಯ ಪಕ್ಕದ ಮನೆಯ ನಿವಾಸಿಯಾಗಿದ್ದನು. ಅಪರಾಧಿ ಕುಮಾರ್ ಸಂತ್ರಸ್ತೆಯನ್ನ ತನ್ನ ಜೊತೆ ಸಹಕರಿಸು ಎಂದು ಅನೇಕ ಬಾರಿ ಒತ್ತಾಯಿಸಿದ್ದನು. ಆದರೆ ಸಂತ್ರಸ್ತೆ ಇದಕ್ಕೆ ನಿರಾಕರಿಸಿದ ಬಳಿಕ ಈ ಕೃತ್ಯ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.