ಹಾಸನ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹಾಡಹಗಲೇ ಯುವತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿದೆ.
ಸೌಮ್ಯ (22) ಕೊಲೆಯಾದ ದುರ್ದೈವಿ ಯುವತಿ. ಕೊಲೆ ಮಾಡಿದ ಆರೋಪಿ ಮನುವನ್ನು ಪೊಲೀಸರು ಬಂಧಿಸಿದ್ದಾರೆ.
ಸೌಮ್ಯ ಹಾಗೂ ಮನು ಇಬ್ಬರೂ ಕೂಡ ಪಟ್ಟಣದ ಅಬಕಾರಿ ಇಲಾಖೆ ಕಛೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಇವರ ಮಧ್ಯೆ ಪ್ರೀತಿ ಕೂಡ ಇತ್ತು ಎಂಬ ಆರೋಪ ಕೇಳಿ ಬಂದಿದೆ. ಆದರೆ ಆರೋಪಿ ಮನುಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದರು. ಈ ವಿಚಾರ ಸೌಮ್ಯರಿಗೆ ತಿಳಿದ ನಂತರ ಆರೋಪಿಯಿಂದ ದೂರವಿರಲು ಪ್ರಾರಂಭಿಸಿದ್ದಾರೆ. ನಂತರ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಟರಾಜು ಎಂಬವರ ಜೊತೆ ಸೌಮ್ಯರಿಗೆ ಮದುವೆ ನಿಶ್ಚಯ ಆಗಿದೆ.
ಆರೋಪಿ ಮನು ಈ ವಿಚಾರವನ್ನು ತಿಳಿದು ಕೋಪಕೊಂಡು ಇಂದು ಕಚೇರಿಗೆ ರಜೆ ಇದ್ದ ಕಾರಣಕ್ಕೆ ನೇರವಾಗಿ ಸೌಮ್ಯರ ಮನೆಗೆ ಸುಮಾರು ಮಧ್ಯಾಹ್ನ 12 ಗಂಟೆಗೆ ಹೋಗಿದ್ದಾನೆ. ನಂತರ ಆಕೆಯ ಜೊತೆ ಜಗಳವಾಡಿ, ಜಗಳ ವಿಕೋಪಕ್ಕೆ ಹೋಗಿ ಕಣ್ಣಿಗೆ ಖಾರದ ಪುಡಿ ಹಾಕಿ ನಂತರ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಸಕಲೇಶಪುರ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಮನುವನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.