ರಾಯಚೂರು: ಜೂಜು, ಕುಡಿತದ ಚಟಕ್ಕೆ ಬಿದ್ದು ಸಾಲ ಮಾಡಿ, ತೀರಿಸಲಾಗದೇ ಮನೆ ಮಾರಾಟಕ್ಕಿಟ್ಟಿದ್ದ ಎಂದು ತಾಯಿ ಸೇರಿದಂತೆ ಸಂಬಂಧಿಕರೇ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.
ಅಮರೇಶ್ (43) ಕೊಲೆಯಾದ ವ್ಯಕ್ತಿ. ಮದ್ಯ ವ್ಯಸನದ ಜೊತೆ ಇಸ್ಪೀಟ್ ಶೋಕಿಗೆ ಬಿದ್ದು, ಸಾಲ ತೀರಿಸಲು ಮನೆ ಮಾರಾಟಕ್ಕೆ ಯತ್ನಿಸಿದ್ದ ಹಿನ್ನೆಲೆ ಮನೆಯವರೊಂದಿಗೆ ಜಗಳ ನಡೆದಿದೆ. ತಾಯಿ, ಅಕ್ಕ, ಭಾವ ಸೇರಿಕೊಂಡು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಭಾವ ಸಂತೋಷ್ ಈ ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಲಿಯಿಂದ ತಲೆಗೆ ಹೊಡೆದು, ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಸಿರವಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತ ಅಮರೇಶ್ ಪತ್ನಿ ಸೌಭಾಗ್ಯ ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಮರೇಶ್ ಕೆಲಸಕ್ಕೆ ಹೋಗದೇ ಮನೆಯಲ್ಲಿ ಪ್ರತಿದಿನ ಗಲಾಟೆ ಮಾಡುತ್ತಿದ್ದ. ಗಂಡ ದುಡಿಯುವುದಿಲ್ಲ ಅಂತ ಪತ್ನಿ ಸೌಭಾಗ್ಯ ತವರು ಸೇರಿದ್ದಳು. ಇಸ್ಪೀಟ್ ಹಾಗೂ ಮದ್ಯದ ಚಟಕ್ಕೆ ಸಾಲ ಹೆಚ್ಚಾಗಿತ್ತು. ಹೀಗಾಗಿ ಸಾಲ ತೀರಿಸಲು ಮನೆ ಮಾರಾಟಕ್ಕೆ ಅಮರೇಶ್ ಮುಂದಾಗಿದ್ದ. ಇದೇ ವಿಚಾರವಾಗಿ ತಡರಾತ್ರಿ ಮನೆಯಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಎಳೆದೊಯ್ದು ಅತ್ಯಾಚಾರ ಮಾಡಿದ್ರು
ಆರೋಪಿಗಳು ಮೃತದೇಹವನ್ನು ಮನೆಯಿಂದ ಹೊರಗೆ ಬೀಸಾಡಿದ್ದರು. ಬೆಳಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.