ಬೆಂಗಳೂರು: ಮದುವೆಯಾಗಿ ಮೂವರು ಮಕ್ಕಳಿದ್ದರು ಎರಡನೇ ವಿವಾಹಕ್ಕೆ ಮೊದಲ ಪತ್ನಿ ಅಡ್ಡಿಯಾಗಿದ್ದರಿಂದ ಬಾವಿ ಬಾಮೈದ ಬಾವನ ಪತ್ನಿಯ ಮೇಲೆ ಹಲ್ಲೆ ನಡೆಸಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈ ಲೇಔಟ್ ನಿವಾಸಿ ಪ್ರೇಮ್ ಕುಮಾರ್ ಹಾಗೂ ಲುಬಿನಾ 18 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಆದರೆ ಇವರ ಸಂಸಾರದಲ್ಲಿ ಮೂರು ವರ್ಷಗಳ ಹಿಂದೆ ಮೋನಿಷಾ ಎಂಬ ಯುವತಿ ಎಂಟ್ರಿ ಆಗಿದ್ದರಿಂದ ಇಂದು ಲುಬಿನಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.
Advertisement
ಲುಬಿನಾ ಪತಿ ಪ್ರೇಮ್ ಕುಮಾರ್ ಹಾಗೂ ಮೋನಿಷಾ ನಡುವೆ ಅಕ್ರಮ ಸಂಬಂಧ ಇದ್ದು, ಇಬ್ಬರು ಮದುವೆಯಾಗಲು ನಿಶ್ಚಯಿಸಿದ್ದರಿಂದ ವಿಚ್ಛೇದನ ಕೋರಿ ಪ್ರೇಮ್ ಕುಮಾರ್ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಈ ಸಂಬಂಧ ವಿಚಾರಣೆ ನಡೆಯುತ್ತಿತ್ತು. ಬುಧವಾರ ಸಹ ವಿಚಾರಣೆಗೆ ದಂಪತಿಗಳು ಹಾಜರಾಗಬೇಕಿತ್ತು.
Advertisement
ಈ ಮದ್ಯೆ ಮೋನಿಷಾ ಸಹೋದರ ರೋಹಿತ್, ನನ್ನ ಅಕ್ಕನನ್ನು ಮದುವೆಯಾಗು ಎಂದು ಗೋಗರೆದಾಗ ನನ್ನ ಹೆಂಡತಿ ಜೀವಂತವಾಗಿರುವ ತನಕ ನಿನ್ನ ಅಕ್ಕನ ಜೊತೆ ಮದುವೆ ಸಾಧ್ಯವಿಲ್ಲ ಎಂದು ಪ್ರೇಮ್ ಕುಮಾರ್ ಹೇಳಿದ್ದಾನೆ. ಇದರಿಂದ ಮನನೊಂದ ರೋಹಿತ್ ಬುಧವಾರ ರಾತ್ರಿ ಲುಬಿನಾ, ಪೈ ಲೇಔಟ್ ನಲ್ಲಿರುವ ಮಾವನ ಮನೆಯಿಂದ ತಮ್ಮ ಮನೆಗೆ ತೆರಳುವಾಗ ಪಲ್ಸರ್ ಬೈಕಿನಲ್ಲಿ ಬಂದ ರೋಹಿತ್ ನಡು ರಸ್ತೆಯಲ್ಲೇ ಲುಬಿನಾಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದರಿಂದಾಗಿ ಲುಬಿನಾಳ ಸ್ಥಿತಿ ಗಂಭೀರವಾಗಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಸ್ಥಳಿಯರು ತಿಳಿಸಿದ್ದಾರೆ.
Advertisement
ಆರೋಪಿ ರೋಹಿತ್ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರೇಮ್ ಕುಮಾರ್, ರೋಹಿತ್ ಹಾಗೂ ಮೋನಿಷಾ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Advertisement