ಚಿತ್ರದುರ್ಗ: ವ್ಯಕ್ತಿಯೊಬ್ಬ ಚೂಡಿದಾರ್ ವೇಲಿನಿಂದ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶುಭಾ (27) ಮೃತ ಪತ್ನಿ. ಆರೋಪಿ ಪತಿ ಕರಿಯಪ್ಪ ಚೂಡಿದಾರ್ ವೇಲಿನಿಂದ ಉಸಿರುಗಟ್ಟಿಸಿ ಶುಭಾಳನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಆರೋಪಿ ಕರಿಯಪ್ಪ ಮತ್ತು ಮೃತ ಶುಭಾ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಇವರಿಬ್ಬರ ಮಧ್ಯೆ ಸಣ್ಣ-ಪುಟ್ಟ ವಿಚಾರಗಳಿಗೂ ಜಗಳವಾಗುತ್ತಿತ್ತು. ಅದೇ ರೀತಿ ಬುಧವಾರ ರಾತ್ರಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆ ಹೊರಭಾಗದಲ್ಲಿ ಮಲಗಿದ್ದಾಗ ವೇಲಿನಿಂದ ಉಸಿರುಗಟ್ಟಿಸಿ ಶುಭಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಅದೇ ಗ್ರಾಮದಲ್ಲಿ ಮನೆಯೊಂದರಲ್ಲಿ ಅವಿತು ಕುಳಿತಿದ್ದನು. ನಂತರ ಮನೆಯಿಂದ ಹೊರ ಬಂದಾಗ ಪೊಲೀಸರು ಆರೋಪಿ ಕರಿಯಪ್ಪನನ್ನು ಬಂಧಿಸಿದ್ದಾರೆ.
ಆರೋಪಿ ಒಬ್ಬನೇ ಕೊಲೆ ಮಾಡಿಲ್ಲ, ಅವನ ಜೊತೆ ಮೂರ್ನಾಲ್ಕು ಮಂದಿ ಸೇರಿಕೊಂಡು ಕೊಲೆ ಮಾಡಿದ್ದಾರೆ. ಅವರಿಗೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಶುಭಾ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.