ಮುಂಬೈ: ತಾಯಿ ಮೃತಪಟ್ಟ ಬಳಿಕ ಸಂತಸಪಟ್ಟಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದದಲ್ಲಿ ನಡೆದಿದೆ.
ಶುಭಾಂಗಿ ಲೋಖಂಡೆ (35) ಕೊಲೆಯಾದ ಪತ್ನಿ. ಸಂದೀಪ್ ಲೋಖಂಡೆ ಕೊಲೆ ಮಾಡಿದ ಆರೋಪಿ. ಮೊದಲಿಗೆ ಆರೋಪಿ ಪತ್ನಿ ಶುಭಾಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ನಂಬಿಸಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸದೇ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಜುನಾ ರಾಜ್ವಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು ಪತ್ನಿಯ ಸಾವಿನ ಬಗ್ಗೆ ಅನುಮಾನಗೊಂಡಿದ್ದು, ಈ ಬಗ್ಗೆ ತನಿಖೆ ಮಾಡಲು ನಿರ್ಧರಿಸಿದ್ದರು. ಆಗ ಆರೋಪಿ ಸಂದೀಪ್‍ನನ್ನು ವಶಕ್ಕೆ ಪಡೆದ ವಿಚಾರಣೆ ಮಾಡಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ತಿಳಿದು ಬಂದಿದೆ. ಅತ್ತೆಯ ಸಾವಿನ ಸುದ್ದಿ ತಿಳಿದು ಶುಭಾಂಗಿ ಸಂತಸಪಟ್ಟಿದ್ದಳು. ಇದರಿಂದ ಪತಿ ಕೋಪಗೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಆರೋಪಿ ಸಂದೀಪ್ ಕೋಲ್ಹಾಪುರದ ಅಪ್ಟೆನಗರದಲ್ಲಿ ವಾಸಿಸುತ್ತಿದ್ದನು. ಆರೋಪಿ ತಾಯಿ ಮಾಲತಿ ಲೋಖಂಡೆ(70) ಆನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಮಾಲತಿ ನಿಧನ ಹೊಂದಿದ್ದರು. ಈ ಸುದ್ದಿ ಕೇಳಿದ ಶುಭಾಂಗಿ ಬಹಳ ಸಂತೋಷ ಪಟ್ಟಿದ್ದಾಳೆ. ಅಷ್ಟೇ ಅಲ್ಲದೇ ಆಕೆ ತನ್ನ ಭಾವನೆಯನ್ನು ಬಚ್ಚಿಡಲು ಸಾಧ್ಯವಾಗದೇ ಎಲ್ಲರ ಮುಂದೆ ಖುಷಿಯನ್ನು ವ್ಯಕ್ತಪಡಿಸಿದ್ದಳು. ಪತ್ನಿಯ ಈ ವರ್ತನೆಯಿಂದ ಕೋಪಗೊಂಡ ಪತಿ ಎರಡನೇ ಮಹಡಿಯಿಂದ ಶುಭಾಂಗಿಯನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸದ್ಯಕ್ಕೆ ಕೊಲ್ಹಾಪುರದ ರಾಜವಾಡ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಈಗ ಅವರನ್ನು ಅಜ್ಜ(ಆರೋಪಿಯ ತಂದೆ) ನೋಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv