ಮುಂಬೈ: ಚಹಾ ಮತ್ತು ಸ್ನಾಕ್ಸ್ ತಯಾರಿಸಿ ಕೊಡಲು ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಪತಿರಾಯನೊಬ್ಬನು ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
ಕೊಲ್ಲಾಪುರದ ಕುರುಂದ್ವಾಡ್ ಗ್ರಾಮದ ನಿವಾಸಿಯಾಗಿರುವ ರಮೇಶ್ ಗಾಯಕ್ವಾಡ್ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮಂಗಳನನ್ನು ಕೊಲೆ ಮಾಡಿದ್ದಾನೆ. ದಂಪತಿಗಳ ನಡುವೆ ಯಾವಾಗಲೂ ಸಣ್ಣ ಪುಟ್ಟ ವಿಷಯಗಳಿಗೂ ಜಗಳ, ಗಲಾಟೆ ನಡೆಯುತ್ತಲೇ ಇತ್ತು. ಆದ್ರೆ ಭಾನುವಾರ ಮಾತ್ರ ಈ ಜಗಳ ಕೊಲೆ ಮಾಡುವ ಹಂತಕ್ಕೆ ತಲುಪಿದೆ.
ಭಾನುವಾರ ಸಂಜೆ ರಮೇಶ್ ತನ್ನ ಪತ್ನಿಗೆ ಚಹಾ ಮತ್ತು ತಿಂಡಿಯನ್ನು ಮಾಡಿ ಕೊಡಲು ಹೇಳಿದ್ದಾನೆ, ಆಗ ಪತ್ನಿ ಮಾಡಲು ಆಗಲ್ಲ ಎಂದು ನಿರಾಕರಿಸಿದ್ದಳು. ಇಷ್ಟು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿ ಕೋಪಗೊಂಡು ತನ್ನ ತವರಿಗೆ ಹೋಗುತ್ತೇನೆ ಎಂದು ಹೊರಟ್ಟಿದ್ದಾರೆ. ಆಗ ಪತಿ ಬಸ್ ನಿಲ್ದಾಣವರೆಗೂ ಬಂದು ಮನೆಗೆ ವಾಪಾಸ್ ಬರುವಂತೆ ಮನವಿ ಮಾಡಿಕೊಂಡಿದ್ದಾನೆ. ಆದ್ರೆ ಪತ್ನಿ ಇದಕ್ಕೆ ಒಪ್ಪದಿದ್ದಾಗ ಸಿಟ್ಟಿಗೆದ್ದ ಪತಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಆಕೆಯನ್ನು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ತನ್ನ ತಪ್ಪಿನ ಅರಿವಾಗಿ, ತನ್ನ ಕುಟುಂಬಕ್ಕೆ ಮಾಹಿತಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಆರೋಪಿ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.