ರಾಂಚಿ: ಮಾನಸಿಕ ಅಸ್ವಸ್ಥನೊಬ್ಬ ಶಿಕ್ಷಕಿಯನ್ನು ಕೊಲೆ ಮಾಡಿ, ಪೊಲೀಸರು ಹಾಗೂ ಜನರಿಂದ ತಪ್ಪಿಸಿಕೊಳ್ಳಲು ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಸುಮಾರು 5 ಕಿ.ಮೀ. ಓಡಿರುವ ಘಟನೆ ಜಾರ್ಖಂಡ್ ನ ಸೆರೈಕೆಲಾ- ಖಾರ್ಸ್ವಾನ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು 26 ವರ್ಷದ ಹರಿ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. 30 ವರ್ಷದ ಸುಕ್ರ ಹೆಸಾ ಮೃತ ಶಿಕ್ಷಕಿ. ಸುಕ್ರ ಹೆಸಾ ಅವರು ಖಪ್ರಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Advertisement
ನಡೆದಿದ್ದೇನು?:
ಆರೋಪಿ ಹರಿ ಶಾಲೆಯ ಹತ್ತಿರದಲ್ಲಿ ಒಬ್ಬನೇ ವಾಸವಾಗಿದ್ದನು. ಮಂಗಳವಾರ ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಊಟ ಬಡಿಸುವ ವೇಳೆ ಹರಿ ಏಕಾಏಕಿ ದಾಳಿ ಮಾಡಿ ಕತ್ತಿಯಿಂದ ಅವರ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ. ನಂತರ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಶಿಕ್ಷಕಿಯ ತಲೆ ಹಿಡಿದುಕೊಂಡು ಕಾಡಿನೊಳಗೆ ಓಡಿಹೋಗಿದ್ದ ಎಂದು ಸೆರೈಕೆಲಾ ಉಪ-ವಿಭಾಗಿಯ ಪೊಲೀಸ್ ಅಧಿಕಾರಿ (ಎಸ್‍ಡಿಪಿಓ) ಅವಿನಾಶ್ ಕುಮಾರ್ ಹೇಳಿದ್ದಾರೆ.
Advertisement
Advertisement
ಆರೋಪಿಯನ್ನು ಪೊಲೀಸರು ಬೆನ್ನೆಟ್ಟಿ ಹೋಗಿದ್ದು, ಸತತ ಎರಡು ಗಂಟೆಗಳ ಕಾಲ ಕಾಡಿನಲ್ಲಿ ಹುಡುಕಾಡಿದ ನಂತರ ಆರೋಪಿ ಹರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸ್ಥಳೀಯರು ಹರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜನರಿಂದ ಆತನನ್ನು ಕಾಪಾಡಿ ಬಂಧಿಸುವ ಸಂದರ್ಭದಲ್ಲಿ ಸೆರೈಕೆಲಾ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಸೇರಿ ನಾಲ್ಕು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ ಎಂದು ಎಸ್‍ಡಿಪಿಓ ಹೇಳಿದ್ದಾರೆ.
Advertisement
ಇನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳದಲ್ಲಿ ಆರೋಪಿಯು ಶಿಕ್ಷಕಿಯನ್ನು ಕೊಲೆ ಮಾಡಿ, ಮೃತದೇಹದ ತಲೆಯನ್ನು ಕೈಯಲ್ಲಿ ಹಿಡಿದು ಕುಳಿತ್ತಿದ್ದನು. ಅವನ ಸುತ್ತ ಸ್ಥಳೀಯರು ನಿಂತಿದ್ದರು. ಆದರೆ ಆರೋಪಿ ಬಳಿ 2 ಕತ್ತಿ ಇದ್ದಿದ್ದರಿಂದ ಯಾರು ಕೂಡ ಆರೋಪಿಯ ಬಳಿ ಹೋಗಲು ಪ್ರಯತ್ನಿಸಲಿಲ್ಲ. ಪೊಲೀಸರು ಹರಿಯನ್ನು ಘಟನಾ ಸ್ಥಳದಲ್ಲೇ ಬಂಧಿಸಲು ಪ್ರಯತ್ನಿಸಿದರೂ ಸ್ಥಳದಲ್ಲಿ ಬಹಳ ಜನರು ನೆರೆದಿದ್ದ ಕಾರಣಕ್ಕೆ ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಆಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಸ್ಥಳೀಯರು ಹರಿಯನ್ನು ಕಲ್ಲಿನಿಂದ ಹೊಡೆಯಲು ಆರಂಭಿಸಿದಾಗ ಆತ ಶಾಲೆಯಿಂದ ಸುಮಾರು 5 ಕಿ.ಮೀ ದೂರದ ಹೆಸೆಲ್ ಎಂಬ ಹಳ್ಳಿಯ ಕಾಡಿಗೆ ತಪ್ಪಿಸಿಕೊಂಡು ಓಡಿಹೋಗಿದ್ದ. ನಂತರ ಪೊಲೀಸರು ಕಷ್ಟಪಟ್ಟು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಸಿಂಗ್ ಅವರು ತಿಳಿಸಿದರು.
ಈ ಘಟನೆಯಿಂದ ಆರೋಪಿ ಹರಿ ಗಾಯಗೊಂಡಿದ್ದು, ಆತನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಜೆಮೆಶೆಡ್‍ಪುರ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ಆಡಳಿತ ಸಿಬ್ಬಂದಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.