ಹೈದರಾಬಾದ್: ಬೆಂಗಳೂರಿನ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಘಟೆನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಅನಂತಪುರದ ಪುಟ್ಟಪರ್ತಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಒಬ್ಲುಸು ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗಮ್ಮ ಎಂಬವರ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ ತಿಳಿದು ಬಂದಿದೆ.
ಆರೋಪಿ ಒಬ್ಲುಸು, ನಾಗಮ್ಮ ಮತ್ತು ಪತಿ ಗಣೇಶ್ ಅವರು ಬೆಂಗಳೂರಿನ ಮುನಿಸಿಪಲ್ ಕಾರ್ಪೋರೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಾಗಮ್ಮ ಮತ್ತು ಒಬ್ಲುಸು ಇಬ್ಬರಿಗೂ ಪರಿಚಯವಾಗಿ ಸ್ನೇಹವಾಗಿತ್ತು. ಸ್ನೇಹ ಪ್ರೀತಿಯಾಗಿ ಆರೋಪಿ ಒಬ್ಲುಸು ನಾಗಮ್ಮಳನ್ನು ಮದುವೆಯಾಗುತ್ತೇನೆ ಎಂದು ಮಾತುಕೊಟ್ಟಿದ್ದನು. ಅದರಂತೆಯೇ ಆಕೆಯನ್ನು ತನ್ನ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಮ್ಮ ಮೊದಲ ಪತ್ನಿಗೆ ನಾನು ಈಕೆಯನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಆತನ ಪತ್ನಿ ವಿರೋಧಿಸಿದ್ದಾರೆ. ಬಳಿಕ ಅಲ್ಲಿಂದ ಅವರಿಬ್ಬರು ಪುಟ್ಟಪರ್ತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಮೀಪದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ.
ಅಕ್ಟೋಬರ್ 25 ರಂದು ನಾಗಮ್ಮ ಮಲಗಿದ್ದಾಗ ಆಕೆಯ ಮಕ್ಕಳಾದ ದರ್ಶಿನಿ(3) ಮತ್ತು 6 ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿ ದೇಹಗಳನ್ನು ಕಾಲುವೆಯ ಬಳಿ ಸಮಾಧಿ ಮಾಡಿ ವಾಪಸ್ ಬಂದಿದ್ದಾನೆ. ಇತ್ತ ನಾಗಮ್ಮ ಎಚ್ಚರಗೊಂಡು ಮಕ್ಕಳ ಬಗ್ಗೆ ವಿಚಾರಿಸಿದಾಗ ಸಂಬಂಧಿ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಆರೋಪಿ ಸುಳ್ಳು ಹೇಳಿದ್ದಾನೆ.
ಇಬ್ಬರು ಒಟ್ಟಿಗೆ ವಾಪಸ್ ಬೆಂಗಳೂರಿಗೆ ಬಂದಾಗ ನಾಗಮ್ಮ ಪತಿ ಗಣೇಶ್ ಅವರನ್ನು ನೋಡಿ ಅನುಮಾನಗೊಂಡಿದ್ದಾನೆ. ಬಳಿಕ ಸಂಬಂಧಿಗಳು ಮತ್ತು ಗಣೇಶ್ ವಿಚಾರಿಸಿದಾಗ ಮಕ್ಕಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪುಟ್ಟಪರ್ತಿ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಲಾಗಿದೆ.
ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸಮಾಧಿ ಮಾಡಿದ್ದ ಸ್ಥಳದಲ್ಲಿ ಮಕ್ಕಳ ದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv