ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ (Live In Relationship) 25ರ ಮಹಿಳೆಯನ್ನ ಕತ್ತು ಹಿಸುಕಿ ಕೊಲೆಗೈದು, ಆಕೆಯ ಮೃತದೇಹವನ್ನು ಮನೆಯಿಂದ 12 ಕಿಮೀ ದೂರದಲ್ಲಿ ಎಸೆದಿರುವ ಘಟನೆ ಈಶಾನ್ಯ ದೆಹಲಿಯಲ್ಲಿ ನಡೆದಿದೆ.
ಇದೇ ಏಪ್ರಿಲ್ 12ರ ತಡರಾತ್ರಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ (Women) ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿರಲಿಲ್ಲ, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದುಬಂದಿದೆ ಎಂದು ಉಪಪೊಲೀಸ್ ಆಯುಕ್ತ ಜಾರ್ಜ್ ಟರ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?
ಏನಿದು ಘಟನೆ?
ರೋಹಿತಾ (25) ಎಂಬ ಮಹಿಳೆ, ವಿನೀತ್ ಎಂಬವನ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದಳು. ಕಳೆದ 4 ವರ್ಷಗಳ ಹಿಂದೆ ಇವರಿಬ್ಬರು ಮನೆ ಬಿಟ್ಟು ಓಡಿಹೋಗಿದ್ದರು. ನಂತರ ರೋಹಿತಾ, ವಿನೀತ್‌ಗೆ ಮದುವೆಯಾಗುವಂತೆ (Marriage) ಒತ್ತಾಯಿಸುತ್ತಿದ್ದಳು. ಇದೇ ವಿಷಯಕ್ಕಾಗಿ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಏಪ್ರಿಲ್ 12 ರಂದು ಸಹ ಜಗಳವಾಡಿದ್ದರು, ಈ ವೇಳೆ ಮಾತಿಗೆ ಮಾತು ಬೆಳೆದು, ವಿನೀತ್, ರೋಹಿತಾಳನ್ನ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತನ್ನ ಸ್ನೇಹಿತನ ಸಹಾಯದಿಂದ ಶವ ಎಸೆದು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು
ಮೃತದೇಹ ಪತ್ತೆಯಾದ ನಂತರ ಅರೋಪಿಗಳನ್ನ ಪತ್ತೆಹಚ್ಚಲು 50ಕ್ಕೂ ಹೆಚ್ಚು ಪೊಲೀಸರನ್ನೊಳಗೊಂಡ ವಿಶೇಷ ತಂಡವನ್ನ ರಚಿಸಲಾಗಿತ್ತು. ಶವ ಪತ್ತೆಯಾದ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಬೈಕ್‌ನಲ್ಲಿ ಇಬ್ಬರು ಪುರುಷರು ಮೃತದೇಹ ಎಸೆದು ಹೋಗಿರುವುದು ಕಂಡುಬಂದಿತ್ತು. ವೀಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಮೃತದೇಹ ಹೊತ್ತುಕೊಂಡು ಹೋಗುತ್ತಿದ್ದನು, ಈ ವೇಳೆ ಆರೋಪಿಯ ಸಹೋದರಿ ಪಾರುಲ್, ಅವನ ಹಿಂದೆ ಹೋಗುತ್ತಿದ್ದಳು. ಅಲ್ಲದೇ ತನ್ನ ಸ್ಕಾಫ್‌ನಿಂದ ಶವವನ್ನ ಮರೆಮಾಚಲು ಸಹಾಯ ಮಾಡಿದ್ದಳು ಎಂಬುದು ಗೊತ್ತಾಯಿತು. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಳು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವ ಸಾಗಿಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗಳಿಗೆ ಸಹಕರಿಸಿದ್ದ ಎರಡು ಮಕ್ಕಳ ತಾಯಿ ಪಾರುಲ್ ಎಂಬಾಕೆಯನ್ನ ಬಂಧಿಸಲಾಗಿದೆ. ವಿನೀತ್ ಹಾಗೂ ಸ್ನೇಹಿತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ವಿನೀತ್ ಮತ್ತು ಅವನ ತಂದೆ 2019 ರಲ್ಲಿ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಆದ್ರೆ ಆರೋಪಿ ವಿನೀತ್ ಕಳೆದ ವರ್ಷ ನವೆಂಬರ್‌ನಿಂದ ಜಾಮೀನಿನ ಮೇಲೆ ಹೊರಗಿದ್ದ.