ಯಾದಗಿರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ ನಂತರ ಪೋಲಿಸರಿಗೆ ಶರಣಾಗಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ.
ಹಮೀದಾಬಿ (31) ಕೊಲೆಯಾದ ಮಹಿಳೆ. ಮಹ್ಮದ್ ಜಾಫರ್ ಹಮೀದಾಬಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮೃತ ಹಮೀದಾಬಿ ಮತ್ತು ಮಹ್ಮದ್ ಜಾಫರ್ ನಡುವೆ ಸಣ್ಣ ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಬುಧವಾರ ಕೂಡ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ತಾರಕ್ಕೇರಿ ಪತ್ನಿ ರಂಜಾನ್ ಉಪವಾಸ ಇದ್ದರೂ ಲೆಕ್ಕಿಸದೆ, ಚಾಕುವಿನಿಂದ ಕತ್ತು ಕೊಯ್ದು ಪತಿ ಮಹ್ಮದ್ ಜಾಫರ್ ಕೊಲೆ ಮಾಡಿದ್ದಾನೆ. ನಂತರ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸದ್ಯಕ್ಕೆ ಜಾಫರ್ ಪೊಲೀಸರ ವಶದಲ್ಲಿದ್ದು, ಘಟನೆ ನಡೆದ ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.