ಹಾಸನ: ತಂದೆಯನ್ನೇ ಹತ್ಯೆಗೈದು ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿಯನ್ನು ಪೊಲೀಸರು (Police) ಸಕಲೇಶಪುರದ (Sakleshpura) ಲಿಂಗಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದಿನೇಶ್ (34) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ತಂದೆ ಶಶಿಧರ್ (58) ಎಂಬವರನ್ನು ಹತ್ಯೆ ಮಾಡಿದ್ದ. ಆರೋಪಿ ಕಂಠಪೂರ್ತಿ ಕುಡಿದು ಬಂದು ತಂದೆ ಜೊತೆ ಜಗಳವಾಡಿದ್ದ. ಬಳಿಕ ತಂದೆಗೆ ಕಾಲಿನಿಂದ ಒದ್ದಿದ್ದ. ಈ ವೇಳೆ ಶಶಿಧರ್ ಕುಸಿದು ಬಿದ್ದಿದ್ದರು. ಇದನ್ನು ಕಂಡು ದಿನೇಶ್ ತಾಯಿ ಗಾಬರಿಗೊಂಡು ಮನೆಯಿಂದ ಸಹೋದರನ ತೆರಳಿದ್ದರು. ನಂತರ ದಿನೇಶ್, ತಂದೆಗೆ ಹೃದಯಾಘಾತವಾಗಿದೆ ಎಂದು ಅರೇಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದ.
ಆಸ್ಪತ್ರೆಯಲ್ಲಿ ಶಶಿಧರ್ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು. ಬಳಿಕ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ತಂದಿದ್ದಾಗ ತಂದೆ ಜೊತೆ ಜಗಳವಾಡುವುದನ್ನು ನೋಡಿದ್ದ ಗ್ರಾಮಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ದಿನೇಶ್ ವಿರುದ್ಧ ಆತನ ತಾಯಿ ಅರೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಅರೇಹಳ್ಳಿ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.