ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಮಹಿಳಾ ಪಾರ್ಟ್ ನರ್‌ಳನ್ನು ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ (Body Fridge) ನಲ್ಲಿಟ್ಟ ಆಘಾತಕಾರಿ ಘಟನೆ ನಡೆದಿರುವುದು ಹೈದರಾಬಾದ್ (Hyderabad Woman Murder) ನಲ್ಲಿ ಬೆಳಕಿಗೆ ಬಂದಿದೆ.
ಮೃತಳನ್ನು ಅನುರಾಧ ರೆಡ್ಡಿ(55) ಎಂದು ಗುರುತಿಸಲಾಗಿದೆ. ಈಕೆಯನ್ನು ಚಂದ್ರ ಮೋಹನ್(48) ಕೊಲೆ ಮಾಡಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಅನುರಾಧಳನ್ನು ಆರೋಪಿ ಚಂದ್ರ ಮೋಹನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡುವ ಸಲುವಾಗಿ ಹಲವು ತುಂಡುಗಳನ್ನಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 17ರಂದು ಮೂಸಿ ನದಿ ಸಮೀಪವಿರುವ ಅಫ್ಜಲ್ ನಗರದ ಸಮುದಾಯ ಭವನದ ಬಳಿ ಇರುವ ತೀಗಲ್‍ಗಢ ಪ್ರದೇಶದಲ್ಲಿ ಕಪ್ಪು ಕವರಿನಲ್ಲಿ ಮಹಿಳೆಯೊಬ್ಬರ ತಲೆ ಪತ್ತೆಯಾಗಿತ್ತು. ಇದನ್ನು ಪೌರ ಕಾರ್ಮಿಕರೊಬ್ಬರು ಗಮನಿಸಿದ್ದು ನಂತರ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು 8 ತಂಡಗಳನ್ನು ರಚಿಸಿ ತನಿಖೆಗೆ ಇಳಿದರು. ಈ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಆರೋಪಿ ಚಂದ್ರ ಮೋಹನ್ ಹಾಗೂ ಮೃತ ಮಹಿಳೆ ಅನುರಾಧ ರೆಡ್ಡಿ ನಡುವೆ ಅಕ್ರಮ ಸಂಬಂಧ ಇರುವುದು ಬಯಲಾಗಿದೆ ಎಂದು ಆಗ್ನೇಯ ವಲಯ ಡಿಸಿಪಿ ರೂಪೇಶ್ ತಿಳಿಸಿದ್ದಾರೆ.
2018ರಲ್ಲಿ ಅನುರಾಧಗೆ ಚಂದ್ರ ಮೋಹನ್ ತನ್ನ ಮನೆಯ ನೆಲ ಮಹಡಿಯಲ್ಲಿ ವಾಸಿಸಲು ಜಾಗ ನೀಡಿದ್ದಾನೆ. ಈ ವೇಳೆ ಆರೋಪಿ ಮೃತಳಿಂದ 7 ಲಕ್ಷ ರೂ. ಹಣವನ್ನು ಪಡೆದು ಹಿಂದಿರುಗಿಸದೆ ಆಟವಾಡಿಸುತ್ತಿದ್ದ. ಮಹಿಳೆ ಹಣ ನೀಡುವಂತೆ ಚಂದ್ರಮೋಹನ್ ನನ್ನು ಪೀಡಿಸುತ್ತಿದ್ದಳು. ಮಹಿಳೆಯ ಒತ್ತಡದಿಂದ ಸಿಟ್ಟಿಗೆದ್ದ ಚಂದ್ರಮೋಹನ್ ಆಕೆಯನ್ನು ಮುಗಿಸುವ ಚಿಂತನೆ ಮಾಡಿದ್ದಾನೆ. ಅಂತೆಯೇ ಮೇ 12ರಂದು ಹಣ ಹಿಂದಿರುಗಿಸುವ ನೆಪದಲ್ಲಿ ಆರೋಪಿ, ಮೃತಳ ಜೊತೆ ಗಲಾಟೆ ತೆಗೆದಿದ್ದಾನೆ. ಇದನ್ನೂ ಓದಿ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ – ಪಾರ್ಟಿ ನೆಪದಲ್ಲಿ ಸ್ನೇಹಿತನ ಮರ್ಡರ್
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಮನ ಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಸಾಗಿಸುವ ಸಲುವಾಗಿ ಆರೋಪಿಯೂ ಕಲ್ಲು ಕತ್ತರಿಸುವ 2 ಮೆಷಿನ್‍ಗಳನ್ನು ಖರೀದಿಸಿದ್ದಾನೆ. ನಂತರ ದೇಹದ ಭಾಗಗಳನ್ನ ಮನಬಂದಂತೆ ತುಂಡರಿಸಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಸಿ ನಗರದ ವಿವಿಧೆಡೆ ಎಸೆದಿದ್ದಾನೆ.
ಇಷ್ಟೇ ಅಲ್ಲದೆ ಮೃತಳ ಕೈ-ಕಾಲುಗಳನ್ನು ಫ್ರಿಡ್ಜ್‍ನಲ್ಲಿ ಇರಿಸಿದ್ದಾನೆ. ಉಳಿದ ಭಾಗಗಳನ್ನು ಬಿಸಾಕಲೆಂದು ಸೂಟ್‍ಕೇಸ್ ಕೂಡ ತಂದಿದ್ದಾನೆ. ಬಳಿಕ ಅನುರಾಧ ಮೊಬೈಲ್‍ನಿಂದ ಆಕೆಯ ಪರಿಚಯಸ್ಥರಿಗೆ ಮೆಸೇಜ್ ಮಾಡಿ ಜೀವಂತ ಇರುವುದಾಗಿ ನಂಬುವಂತೆ ಮಾಡಿದ್ದ. ಇನ್ನು ಮೃತ ದೇಹದಿಂದ ದುರ್ವಾಸನೆ ಬರದಂತೆ ಅದರ ಮೇಲೆ ವಿವಿಧ ದ್ರವಗಳನ್ನು ಸಿಂಪಡಿಸಿದ್ದಾನೆ ಎಂದು ರೂಪೇಶ್ ವಿವರಿಸಿದ್ದಾರೆ.