Connect with us

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ

ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮರ್ಯಾದಾ ಹತ್ಯೆ ನಡೆದಿದೆಯಾ? ಪತಿಯೇ ತನ್ನ ಹೆಂಡತಿ ಸೇರಿದಂತೆ ಮೂವರನ್ನ ಕೊಲೆ ಮಾಡಿರಬಹುದೆಂಬ ಅನುಮಾನ ಪೊಲೀಸರಿಗೆ ಮೂಡಿದೆ.

ಘಟನೆಗೆ ಸಂಬಂದಿಸಿದಂತೆ ಪೊಲೀಸರು ಚಿಂತಾಮಣಿ ಮೂಲದವನಾದ ವೆಂಕಟರೆಡ್ಡಿ ಎಂಬಾತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಏನಿದು ಘಟನೆ?: ಚಿಂತಾಮಣಿ ಮೂಲದ ವೆಂಕಟರೆಡ್ಡಿ ಹಾಗೂ ಪತ್ನಿ ಪ್ರೇಮಾ ಕಾಡುಗೋಡಿಯಲ್ಲಿ ವಾಸವಾಗಿದ್ದನು. ಆದರೆ ಶ್ರೀನಾಥ್ ಎಂಬ ಯುವಕ ಹಾಗೂ ವೆಂಕಟರೆಡ್ಡಿ ಪತ್ನಿ ಪ್ರೇಮಾ ನಡುವೆ ವಿವಾಹ ಪೂರ್ವ ಪ್ರೇಮವಿತ್ತು. ಈ ವಿಚಾರ ತಿಳಿದು ಪತಿ ಎಚ್ಚರಿಕೆ ನೀಡಿದ್ದರೂ ಶ್ರೀನಾಥ್ ಜೊತೆ ಪ್ರೇಮಾ ಪರಾರಿಯಾಗಿದ್ದಳು ಎನ್ನಲಾಗಿದೆ.

ವೆಂಕಟರೆಡ್ಡಿ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಈ ಮಧ್ಯೆ ವೆಂಕಟರೆಡ್ಡಿ ಶ್ರೀನಾಥ್‍ನ ತವರೂರು ಚಿಂತಾಮಣಿ ಬಳಿ ರಾಯಪ್ಪಳ್ಳಿಯ ಮನೆಗೆ ಹೋಗಿ ತಾಯಿ ಭಾಗ್ಯಮ್ಮಗೆ ವಿಷ ಕುಡಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪವಿದೆ. ಆದ್ರೆ ಚಿಂತಾಮಣಿ ಪೊಲೀಸರು ಆತ್ಮಹತ್ಯೆ ಎಂದು ದೂರು ದಾಖಲಿಸಿಕೊಂಡು ಪ್ರಕರಣ ಕ್ಲೋಸ್ ಮಾಡಿದ್ದಾರೆ ಎನ್ನಲಾಗಿದೆ.

ತಾಯಿಯ ಸಾವಿನ ವಿಷಯ ತಿಳಿದು ಶ್ರೀನಾಥ್ ಮತ್ತು ಪ್ರೇಮಾ ವಾಪಸ್ ಮತ್ತೆ ಊರಿಗೆ ಬಂದಿದ್ದರು. ನಂತರ ಪೊಲೀಸ್ ಠಾಣೆಯಲ್ಲಿ ವೆಂಕಟರೆಡ್ಡಿ ತನ್ನ ಪತ್ನಿಗೆ ಬುದ್ಧಿವಾದ ಹೇಳಿ ಅವಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದನು. ಅಂತೆಯೇ ಪತ್ನಿ ಪ್ರೇಮಾ ಜು. 17 ರಂದು ವೆಂಕಟರೆಡ್ಡಿ ಜೊತೆ ತೆರಳಿದ್ದಳು. ಇದಾದ ಮೂರು ದಿನದ ಬಳಿಕ ಪ್ರೇಮಾ ಸಾವನ್ನಪ್ಪಿದ್ದಳು. ಇತ್ತ ಪ್ರೇಮಾ ಸಾವಿನ ಬಳಿಕ ಶ್ರೀನಾಥ್ ಕೂಡ ಕಣ್ಮರೆಯಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಶ್ರೀನಾಥ್ ಕಾಣೆಯಾದ ಬಗ್ಗೆ ವಿಚಾರಿಸಲು ವೆಂಕಟರೆಡ್ಡಿಯನ್ನು ಠಾಣೆಗೆ ಕರೆಸಿದಾಗ ಪ್ರೇಮಾ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಅನುಮಾನ ಮೂಡಿಸಿದೆ. ಮಣ್ಣು ಮಾಡುವ ಪದ್ಧತಿ ಇದ್ದರೂ ವೆಂಕಟರೆಡ್ಡಿ ಪ್ರೇಮಾಳನ್ನು ಸುಟ್ಟು ಹಾಕಿದ್ದು, ಹತ್ಯೆ ಮಾಡಿರಬಹುದು. ಪೊಲೀಸರಿಗೆ ಸಾಕ್ಷಿ ಸಿಗಬಾರದೆಂಬ ಕಾರಣಕ್ಕೆ ಪ್ರೇಮಾಳನ್ನು ಸುಟ್ಟಿದ್ದಾನೆ ಎಂದು ಶಂಕಿಸಲಾಗಿದೆ.

ವೆಂಕಟರೆಡ್ಡಿ ಮರ್ಯಾದೆಗಾಗಿ ಪ್ರೇಮಾಳನ್ನು ಒಂದೆಡೆ ಹತ್ಯೆ ಮಾಡಿ ಸುಟ್ಟು ಹಾಕಿದ್ದಾನೆ ಎಂಬ ಅನುಮಾನವೂ ಮೂಡಿದೆ. ಶ್ರೀನಾಥ್ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ವಿಷಯ ತಿಳಿದ ಮೇಲೆ ವೆಂಕಟರೆಡ್ಡಿಯನ್ನು ಕರೆದು ಅವನ ಪತ್ನಿ ಪ್ರೇಮಾ ಬಗ್ಗೆ ವಿಚಾರಿಸಿದ್ದಾರೆ. ಆಗ ಅವನು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ವೆಂಕಟರೆಡ್ಡಿಯ ಮೇಲೆ ಪೊಲೀಸರಿಗೆ ಅನುಮಾನ ಬಂದು ಅವನನ್ನು ವಶಕ್ಕೆ ಪಡೆದು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನು ತನಿಖೆ ವೇಳೆ ಈ ಪ್ರಕರಣದಲ್ಲಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ. ಇಷ್ಟೆಲ್ಲಾ ಘಟನೆ ನಡೆದ ಬಳಿಕವೂ ಶ್ರೀನಾಥ್ ಎಲ್ಲಿದ್ದಾನೆ ಎಂಬ ಬಗ್ಗೆ ಪೊಲೀಸರಿಗೆ ಇದೂವರೆಗೆ ಯಾವುದೇ ಮಾಹಿತಿ ಇಲ್ಲ. ಈತ ಇನ್ನೂ ಬದುಕಿದ್ದಾನಾ ಅಥವಾ ವೆಂಕಟರೆಡ್ಡಿ ಈತನಿಗೆ ಏನಾದ್ರೂ ಮಾಡಿದ್ದಾನಾ ಎಂಬ ಹಾದಿಯಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Advertisement
Advertisement