ಬೆಂಗಳೂರು: ಪತ್ನಿಯನ್ನು ಕೊಂದು ಬಳಿಕ ತಾನೂ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ.
ನಗರದ ದಿ ಅಲೆಕ್ಸ್ ಸೈಕಾನ್ ಪೋಲರಿಸ್ ಅಪಾರ್ಟ್ ಮೆಂಟ್‍ನಲ್ಲಿ ಕಳೆದ 20 ವರ್ಷಗಳಿಂದ ಮುಂಬೈ ಮೂಲದ ಉದ್ಯಮಿ ಅತುಲ್ ಉಪಾಧ್ಯಾಯ, ಪತ್ನಿ ಮಮತಾ ಉಪಾಧ್ಯಾಯ ವಾಸವಿದ್ದರು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದ ಪತಿ ಅತುಲ್ ಉಪಾಧ್ಯಾಯ, ಏಕಾಏಕಿ ಪತ್ನಿಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕೊಲೆ ಮಾಡಿದ ನಂತರ ಅತುಲ್, ತನ್ನ ಮನೆಯಲ್ಲಿ ಸಾಕಿದ್ದ ನಾಯಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಂದಿದ್ದಾನೆ. ಈ ಎರಡೂ ಸಾವನ್ನು ನೋಡಿದ ಅತುಲ್, ಅಪಾರ್ಟ್ ಮೆಂಟ್‍ನ ಆರನೇ ಮಹಡಿಗೆ ಹೋಗಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸದಾಶಿವನಗರ ಪೊಲೀಸರಿಗೆ ಐದು ಪುಟಗಳ ಡೆತ್ ನೋಟ್ ಸಿಕ್ಕಿದೆ. ಮೂರು ಸಾವಿಗೆ ಕಾರಣವೇನು ಎನ್ನುವುದು ಡೆತ್ ನೋಟ್ ನಲ್ಲಿ ಇರುವ ಅಂಶಗಳಿಂದಲೇ ಬಯಲಾಗಬೇಕಿದೆ. ಏಕೆಂದರೆ ಈ ದಂಪತಿಗೆ ಮದುವೆ ಆಗಿ 25 ವರ್ಷ ಆದರೂ ಮಕ್ಕಳಿರಲಿಲ್ಲ. ಹೀಗಾಗಿ ಮನೆಯಲ್ಲಿ ಪತಿ-ಪತ್ನಿ ಜೊತೆಗೆ ನಾಯಿ ಮಾತ್ರ ಇತ್ತು.
ಪೊಲೀಸ್ ಮೂಲಗಳ ಪ್ರಕಾರ ಅತುಲ್ ಉಪಾಧ್ಯಾಯಗೆ ಕ್ಯಾನ್ಸರ್ ಇದ್ದು, ಇದರಿಂದ ಬೇಸತ್ತಿದ್ದ ಎನ್ನುವುದು ಒಂದು ಕಡೆಯಾದರೆ ಬ್ಯುಸಿನೆಸ್ ನಿಂದ ವಿಪರೀತ ಲಾಸ್ ಆಗಿದ್ದು ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.