ಚಿಕ್ಕಮಗಳೂರು: ಅಕ್ಟೋಬರ್ 5ರಂದು ಚಿಕ್ಕಮಗಳೂರಿನ ಕಡೂರು ತಾಲೂಕು ಬೀರೂರಿನ ಮೋಹನ್ ಎಂಬವರು ಬೆಳಗಿನ ಜಾವ 6.30.ಕ್ಕೆ, ಪೂಜೆಗೆಂದು ಬೇವಿನ ಸೊಪ್ಪು ತರಲು ತಮ್ಮ ಟಿವಿಎಸ್ ಎಕ್ಸೆಲ್ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಅಲ್ಲೇ ಸಾಗುತ್ತಿದ್ದ 19 ವರ್ಷದ ಶಿವರಾಜ್ ಕಣ್ಣು, ಮೋಹನ್ ಹೋಗುತ್ತಿದ್ದ ಟಿವಿಎಸ್ ಎಕ್ಸೆಲ್ ಬೈಕ್ ಮೇಲೆ ಬಿದ್ದಿತ್ತು.
ಅಣ್ಣಾ ಪಕ್ಕದ ತೋಟಕ್ಕೆ ಕೆಲಸಕ್ಕೆ ಹೋಗ್ತಿದ್ದೇನೆ, ಅಲ್ಲಿವರೆಗೂ ಬಿಡ್ತೀರಾ ಅಂತ ಬೈಕ್ ಹತ್ತಿ ಕೂತಿದ್ದಾನೆ. ಮಾರ್ಗ ಮಧ್ಯೆ ಮೋಹನ್‍ಗೆ ಫೋನ್ ಬಂದಿದ್ದು, ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಬಿದ್ದಿದ್ದ ದೊಣ್ಣೆ ಎತ್ತಿಕೊಂಡ ಶಿವರಾಜ್, ಮೋಹನ್‍ಗೆ ಹೊಡೆದು ಕೊಲೆಗೈದಿದ್ದನು. ಬಳಿಕ ಬೈಕ್ ಹಾಗೂ ಮೊಬೈಲ್ ಕದ್ದು ಅಲ್ಲಿಂದ ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಶಿವರಾಜ್‍ನನ್ನು ಬಂಧಿಸಿದ್ದಾರೆ.
Advertisement
Advertisement
ಪೇಪರ್ ಹಾಕಿ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ ಶಿವರಾಜ್‍ಗೆ, ಟಿವಿಎಸ್ ಎಕ್ಸಲ್ ಬೈಕ್ ತೆಗೆದುಕೊಳ್ಳಲೇಬೇಕೆಂದು ಹಠವಿತ್ತಂತೆ. ಅದಕ್ಕಾಗಿ ಬೀರೂರಿನ ನಿರ್ಜನ ಪ್ರದೇಶದಲ್ಲಿ ಯಾರಾದ್ರೂ ಟಿವಿಎಸ್ ಗಾಡಿ ಓಡಿಸುತ್ತಿದ್ರೆ ಕದಿಯೋಕೆ ಅಂತಾನೆ ಹೊಂಚು ಹಾಕುತ್ತಿದ್ದನಂತೆ. ಇದಕ್ಕೆ ಸರಿಯಾಗಿ ಸಿಕ್ಕ ಮೋಹನ್ ಅವರನ್ನ ಮೂರು ದಿನಗಳ ಕಾಲ ಹೊಂಚು ಹಾಕಿ ಕೊಂದಿದ್ದಾನೆ. ಕೊಲೆ ಬಳಿಕ ಮೋಹನ್ ಶವವನ್ನು ಶಿವರಾಜ್ ಎಳೆದುಕೊಂಡು ಹೋಗುತ್ತಿದ್ದ, ದೃಶ್ಯ ಅಲ್ಲೇ ಸಮೀಪದ ತೋಟವೊಂದರಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿತ್ತು.
Advertisement
ಅಲ್ಲದೇ ತರಿಕೆರೆಯ ಕುಡ್ಲೂರು ಸಮೀಪ ಮೃತ ಮೋಹನ್ ಮೊಬೈಲ್ ಸ್ವಿಚ್ ಆಫ್ ಆಗಿರೋದು ಗೊತ್ತಾಗುತ್ತದೆ. ಪೊಲೀಸರು ವಾಟ್ಸಾಪ್ ಗ್ರೂಪಲ್ಲಿ ಗಾಡಿ ಕಳುವಾಗಿರೋ ಬಗ್ಗೆ ಮೆಸೇಜ್ ಹಾಕಿದ್ದರು. ಈ ಎಲ್ಲಾ ಆಧಾರವಿಟ್ಟುಕೊಂಡು ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆರೋಪಿ ಶಿವರಾಜ್ ಭದ್ರಾವತಿಯಲ್ಲಿ ಬೈಕ್ ಮಾರಿ, ಬೇರೆ ಬೈಕ್ ಖರೀದಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
Advertisement
ಚಿಗುರುಮೀಸೆ ಯುವಕನ ಟಿವಿಎಸ್ ಮೊಪೆಡ್ ಶೋಕಿಗೆ ಬಲಿಯಾಗಿದ್ದು ಮಾತ್ರ ಎರಡು ಮಕ್ಕಳ ಅಮಾಯಕ ತಂದೆ. ಕೇವಲ ಒಂದು ಬೈಕ್‍ಗಾಗಿ ಯುವಕ ಕೊಲೆ ಮಾಡುವ ಮಟ್ಟಕ್ಕೆ ಇಳಿದಿರೋದು ಪೊಲೀಸರು ಹಾಗೂ ನಾಗರೀಕರಲ್ಲಿ ಅಚ್ಚರಿ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv