– ಆತ್ಮಹತ್ಯೆಯ ನಾಟಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೊರಟಿದ್ದ ಆರೋಪಿ ಜೈಲುಪಾಲು
ಯಾದಗಿರಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನೇ (Woman) ಕೊಲೆಗೈದು, ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ ಯಾದಗಿರಿ (Yadgiri) ತಾಲೂಕಿನ ಅರಕೇರಾದ ಪಂಚಶೀಲ ನಗರದ ಜಮೀನಿನಲ್ಲಿ ನಡೆದಿದ್ದು, ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು (Police) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಯುವತಿಯನ್ನು ಉತ್ತರ ಪ್ರದೇಶ (Uttara Pradesh) ಮೂಲದ ಅಂತಿಮಾ ವರ್ಮಾ (25) ಎಂದು ಗುರುತಿಸಲಾಗಿದೆ. ಯಾದಗಿರಿಯ ಮಾರುತಿ ರಾಠೋಡ್, ಅಂತಿಮಾ ವರ್ಮಾಳನ್ನು ಕೊಲೆಗೈದ ಕಿರಾತಕ. ಆರೋಪಿ ಮಾರುತಿ ರಾಠೋಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಸಹೋದರನೊಂದಿಗೆ ಅಂತಿಮಾ ವಾಸಿಸುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಳು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆಯುವ ಹುಚ್ಚಿದ್ದ ಅಂತಿಮಾ ರೀಲ್ಸ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಳು.
Advertisement
Advertisement
ಮುಂಬೈನಲ್ಲೇ ವಾಸವಿದ್ದ ಅಂತಿಮಾ ಮನೆ ಪಕ್ಕದಲ್ಲಿ ವಾಸವಾಗಿದ್ದ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ಮೂಲದ ಮಾರುತಿ ರಾಠೋಡ್ ಜೊತೆ ಪ್ರೀತಿ ಮೂಡಿತ್ತು. ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಹಾಗೂ ಅಂತಿಮಾ ಇಬ್ಬರೂ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೇ ಎಲ್ಲೆಂದರಲ್ಲಿ ಸುತ್ತಾಡುತ್ತಾ, ಖುಷಿಯಿಂದ ಜೀವನ ಕಳೆಯುತ್ತಿದ್ದರು.
Advertisement
Advertisement
ಆದರೆ ಇಬ್ಬರ ಪ್ರೀತಿಯ ನಡುವೆ ರೀಲ್ಸ್ ವಿಚಾರವೇ ಬಿರುಗಾಳಿ ಎಬ್ಬಿಸಿದೆ. ಅಂತಿಮಾ ಬೇರೆ ಬೇರೆ ಸ್ನೇಹಿತರ ಜೊತೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಚಾಳಿ ಹೊಂದಿದ್ದಳಂತೆ. ಆದರೆ ಬೇರೆ ಯುವಕರೊಂದಿಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಪ್ರೇಮಿ ಮಾರುತಿಗೆ ಇಷ್ಟ ಆಗುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದರ ನಡುವೆ ತಾನು ಪ್ರೀತಿ ಮಾಡುತ್ತಿರುವ ಅಂತಿಮಾ ಎಲ್ಲಿ ತನಗೆ ಕೈಕೊಡುತ್ತಾಳೆಂದು ಶಂಕಿಸಿದ ಮಾರುತಿ, ಆಕೆಯನ್ನು ಏ. 2ರಂದು ತನ್ನೂರು ಯಾದಗಿರಿಗೆ ಕರೆದುಕೊಂಡು ಬಂದಿದ್ದಾನೆ.
ಊರಿಗೆ ಬರುತ್ತಿದ್ದಂತೆ ಬೇರೆ ಹುಡುಗರ ಜೊತೆ ವೀಡಿಯೋ ಮಾಡುವ ವಿಚಾರ ಕುರಿತಂತೆ ಜಗಳ ಮಾಡಿದ್ದಾನೆ. ಅಲ್ಲದೇ ಎಲ್ಲಿ ಕೈ ಕೊಟ್ಟು ಬಿಡ್ತಾಳೆ ಏನೋ ಎನ್ನುವ ಆತಂಕದಿಂದ ಕೂಡಲೇ ಇಬ್ಬರು ಮದುವೆ ಆಗೋಣಾ ಅಂತ ಒತ್ತಾಯ ಮಾಡಿದ್ದನಂತೆ. ಆದರೆ ಸದ್ಯಕ್ಕೆ ಮದುವೆ ಬೇಡ ಅಂತಾ ಹೇಳಿದ ಅಂತಿಮಾಳನ್ನು ಯಾದಗಿರಿ ತಾಲೂಕಿನ ಅರಕೇರಾ ಕೆ ಗ್ರಾಮದ ಹೊರವಲಯದ ಜಮೀನಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತನ್ನದೇ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಮೃತದೇಹ ಸುಟ್ಟು ಹಾಕಿದ್ದಾನೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಸ್ವೀಕೃತ
ಏ. 2ರಂದು ನಡೆದಿದ್ದ ಈ ಘಟನೆಗೆ ಇಡೀ ಯಾದಗಿರಿ ಜಿಲ್ಲೆ ಬೆಚ್ಚಿ ಬಿದ್ದಿತ್ತು. ಅಪರಿಚಿತ ಯುವತಿಯ ಶವ ಸಿಕ್ಕ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಗುರುಮಠಕಲ್ ಪೊಲೀಸರು ತನಿಖೆ ನಡೆಸಿ, ಆರೋಪಿ ಮಾರುತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ ಆರೋಪಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ಒಂದು ವೀಡಿಯೋ ಮಾಡಿ ಎಸ್ಕೇಪ್ ಆಗಿದ್ದ. ವೀಡಿಯೋ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಘಟನೆ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್