ಥಾಣೆ: ಬಾರ್ ಗಲಾಟೆಯಲ್ಲಿ ತನ್ನ ಗೆಳೆಯನನ್ನು ರಕ್ಷಿಸಲು ಹೋಗಿ 26 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.
ಥಾಣೆಯ ಮಿರಾ ರಸ್ತೆಯಲ್ಲಿರೋ ಬಾರ್ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು 26 ವರ್ಷದ ನೊವೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಏನಿದು ಘಟನೆ?: ದಾಹಿಸರ್ ಪೂರ್ವದ ಅನುಪಮ್ ಬಿಲ್ಡಿಂಗ್ ನಿವಾಸಿಯಾದ ನೊವೇಶ್ ಗುರುವಾರ ರಾತ್ರಿ ತನ್ನ ಗೆಳೆಯರಾದ ನಿಖಿಲ್ ಹಾಗೂ ನೀಲೆಶ್‍ರೊಂದಿಗೆ ಮೀರಾ ರೋಡ್‍ನ ಬಾರ್‍ಗೆ ಬಂದು ಮತ್ತೊಬ್ಬ ಗೆಳೆಯನಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಏನೋ ಜಗಳವಾಗ್ತಿರೋದು ಕೇಳಿಸಿತ್ತು. ಆಗ ಈ ಮೂವರು ಅಲ್ಲಿಗೆ ಹೋಗಿ ನೋಡಿದಾಗ ಅವರ ಗೆಳೆಯ ಕಾರ್ತಿಕ್, ಆರೋಪಿ ಸುಜಿತ್ ಮಿಶ್ರಾ ಹಾಗೂ ಮತ್ತಿಬ್ಬರೊಂದಿಗೆ ಜೋರಾಗಿ ವಾಗ್ವಾದ ನಡೆಸುತ್ತಿದ್ದ.
ಈ ನಡುವೆ ನೊವೇಶ್ ಶೆಟ್ಟಿ ಗೆಳೆಯನ ಜಗಳ ಬಿಡಿಸಲೆಂದು ಮಧ್ಯೆ ಹೋಗಿದ್ದ. ಆಗ ಸುಜಿತ್ ನೊವೇಶ್‍ನನ್ನು ತಳ್ಳಿದ್ದಾನೆ. ಇದರಿಂದ ಸಿಟ್ಟುಗೊಂಡ ನೊವೇಶ್‍ನ ಗೆಳೆಯ ನಿಖಿಲ್ ಸುಜಿತ್ ಗೆ ಹೊಡೆದಿದ್ದಾನೆ.
ನಂತರ ಜಗಳ ತಾರಕಕ್ಕೇರಿದ್ದು, ಕಾರ್ತಿಕ್‍ನನ್ನು ಸುಜಿತ್ ನಿಂದಿಸಿದ್ದಾನೆ. ಬಳಿಕ ಕಾರ್ತಿಕ್ ಹತ್ತಿರದ ಪೆಟ್ರೋಲ್ ಬಂಕ್‍ನ ಕಿಟಕಿ ಗಾಜಿನ ಮೇಲೆ ಬಿದ್ದಿದ್ದಾನೆ. ಈ ವೇಳೆ ಸುಜಿತ್ ಗಾಜಿನ ಪೀಸ್ ತೆಗೆದುಕೊಂಡು ನಿಖಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹಲ್ಲೆಯನ್ನು ತಡೆಯಲು ನೊವೇಶ್ ಅಡ್ಡ ಬಂದಿದ್ದು, ಗಾಜಿನ ಪೀಸ್ ಆತನ ಕುತ್ತಿಗೆಗೆ ಇರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನನಪ್ಪಿದ್ದಾನೆ.
ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ನೊವೇಶ್ ಮೂರು ದಿನಗಳ ಹಿಂದೆಯಷ್ಟೇ ಮುಂಬೈಗೆ ತೆರಳಿದ್ದ ಅಂತ ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ನೊವೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ ಅಂತ ಕಾಶಿಮಿರಾ ಪೊಲೀಸ್ ಠಾಣೆಯ ಎಸ್‍ಐ ಸುರೇಶ್ ಖೆಡೆಕರ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಿಖಿಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.