ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

Public TV
2 Min Read
tanishka

ಮುಂಬೈ: ಕಾರಿನ ಲೋನ್ ಹಣ ತೀರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಣ ಮಾಡಿ ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

4 ವರ್ಷದ ತನಿಷ್ಕಾ ಕೊಲೆಯಾದ ಬಾಲಕಿ. ತನಿಷ್ಕಾ ಶವ ಅಕೋಲಾದಲ್ಲಿ ಪತ್ತೆಯಾಗಿದ್ದು, ಆರೋಪಿಗಳಾದ ಶುಭಂ ಜಮ್ನಿಕ್ ಹಾಗೂ ಆತನ ಸ್ನೇಹಿತ ಪ್ರತೀಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಬಾಲಕಿ ತನಿಷ್ಕಾ ಕಿರಾಣಿ ಅಂಗಡಿ ಮಾಲೀಕರಾದ ಅಮೋಲ್ ಅರುಡೆ ಎಂಬವರ ಮಗಳು. ಇವರು ಕೆಲವು ಮನೆಗಳನ್ನ ಬಾಡಿಗೆಗೂ ಕೊಟ್ಟಿದ್ರು. ಆರೋಪಿ ಶುಭಂ ಕಾರ್‍ವೊಂದನ್ನ ಖರೀದಿಸಿದ್ದು ಅದರ ಲೋನ್ ಹಣ ತೀರಿಸಲಾಗಿರಲಿಲ್ಲ. ಹೀಗಾಗಿ 5 ಲಕ್ಷ ರೂ. ಹಣ ಹೊಂದಿಸಲು ತನ್ನ ಸ್ನೇಹಿತನ ಜೊತೆಗೂಡಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಿದ್ದ. ಜೂನ್ 28ರಂದು ತನ್ನ ಮಾಲೀಕನ ಮಗಳಾದ ತನಿಷ್ಕಾಳನ್ನ ದಿಗಿ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ್ದ.

ನನ್ನ ಮಗಳು ಬುದ್ಧಿವಂತೆ. ಆಕೆ ಅಪರಿಚಿತರು ಕರೆದರೆ ಹೋಗುವಂತವಳಲ್ಲ. ಆದ್ದರಿಂದ ಆಕೆ ಕಾಣೆಯಾದಾಗ ಇದು ಅಪರಿಚಿತರ ಕೃತ್ಯವಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಕೂಡಲೇ ಪೊಲೀಸ್ ಠಾಣೆಗೆ ಹೋದೆ. ಆದ್ರೆ ಅಕೆಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಆರೋಪಿಗಳು ಈಗಾಗಲೇ ಬಂಧಿತರಾಗಿದ್ದಾರೆ. ಆದ್ರೆ ಇದು ಶುಭಂನ ಕೆಲಸ ಎಂದು ತಿಳಿದು ನನಗೆ ಶಾಕ್ ಆಯಿತು. ತನಿಷ್ಕಾ ಕಾಣೆಯಾದಾಗ ಆಕೆಯನ್ನು ಪತ್ತೆಹಚ್ಚಲು ಅವನೂ ಕೂಡ ನಮ್ಮೊಂದಿಗಿದ್ದ. ಆದರೆ ಈಗ ಅವನೇ ನನ್ನ ಮಗಳ ಕೊಲೆಗಾರನಾಗಿದ್ದಾನೆ. ನಾನು ಅಸಹಾಯಕನಾಗಿದ್ದೇನೆ. ಅವನನ್ನ ಎಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡೆವು. ಆದ್ರೆ ಅವನು ನಮಗೆ ಈ ರೀತಿ ಮಾಡಿದ್ದಾನೆ ಎಂದು ತನಿಷ್ಕಾ ತಂದೆ ದುಃಖಿತರಾಗಿದ್ದಾರೆ.

ದಿಗಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ಮಾನೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾವು ಎಲ್ಲಾ ಕಡೆ ಹುಡುಕಾಡಿದ ನಂತರ ಹಾಗೂ ಬಾಲಕಿಯ ತಂದೆ ಅಂದುಕೊಂಡಂತೆ ಇದು ಅಪರಿಚಿತರ ಕೃತ್ಯವಲ್ಲ ಎಂಬ ಭರವಸೆ ಇದ್ದಿದ್ದರಿಂದ ನಮಗೆ ಶುಭಂ ಮೇಲೆ ಅನುಮಾನ ಮೂಡಿತು. ನಾಲ್ಕು ದಿನಗಳ ಕಾಲ ಆತ ನಮ್ಮ ದಿಕ್ಕು ತಪ್ಪಿಸಿದ್ದ. ಆದ್ರೆ ನಂತರ ಒಂದೊಂದೇ ವಿಚಾರ ಬಾಯ್ಬಿಟ್ಟ. ಆತ ಕಾರ್‍ವೊಂದನ್ನ ಖರೀದಿಸಿದ್ದು, ಲೋನ್ ಹಣ ತೀರಿಸಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತನ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿ 5 ಲಕ್ಷ ರೂ.ಗಾಗಿ ಬೇಡಿಕೆ ಇಡಬೇಕು ಎಂದುಕೊಂಡಿದ್ದ. ಆದ್ರೆ ತನಿಷ್ಕಾಳನ್ನ ಕಿಡ್ನ್ಯಾಪ್ ಮಾಡಿದ ನಂತರ ಆಕೆ ಗಲಾಟೆ ಮಡಿದ್ದಳು. ಹೀಗಾಗಿ ಇವರು ಪ್ಲಾಸ್ಟಿಕ್ ಬ್ಯಾಗ್‍ವೊಂದನ್ನ ಆಕೆಯ ಮುಖದ ಮೇಲೆ ಹಾಕಿ ಆಕೆಯ ಬಾಯಿ ಮುಚ್ಚಿಸಿದ್ದರು. ನಂತರ ಮುರ್ತಿಜಾಪುರಕ್ಕೆ ಕೊಂಡೊಯ್ದು ಒಂದು ಗೋಣಿಚೀಲದಲ್ಲಿ ಬಾಲಕಿಯನ್ನ ಹಾಕಿ ಬೆಂಕಿ ಹಚ್ಚಿದ್ದರು. ನಂತರ ಅರೆಬೆಂದ ದೇಹವನ್ನ ಅಲ್ಲೇ ಒಂದು ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿದ್ದರು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *