ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುವುದು ಈಗ ಟ್ರೆಂಡ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ನೋಡಿ ಅಸೂಯೆಯಿಂದ ಅಪ್ರಾಪ್ತನನ್ನು ಮೂವರು ಕಿಡ್ನಾಪ್ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಪೊಲೀಸರು ಅಪ್ರಾಪ್ತನನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನ್ಮೋಲ್ ಬಾಬುಲಾಲ್ ಡೊಂಗ್ರೆ, ಕಿಶೋರ್ ಚುನಾಟ್ಕರ್ ಮತ್ತು ಶಹಜಾದ್ ಖಾನ್ ಹಬೀಬ್ ಖಾನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಚುನಾಟ್ಕರ್ ಸೆಕ್ಯುರಿಟಿ ಗಾರ್ಡ್ ಆಗಿ ಮತ್ತು ಖಾನ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಡೊಂಗ್ರೆ ಫೇಸ್‍ಬುಕ್‍ನಲ್ಲಿ ಅಪ್ರಾಪ್ತನ ಫೋಟೋಗಳನ್ನು ನೋಡಿ ಅಸೂಯೆಯಿಂದ ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಆರೋಪಿ ಡೊಂಗ್ರೆ ಮತ್ತು 17 ವರ್ಷದ ಅಪ್ರಾಪ್ತ ಸ್ನೇಹಿತರಾಗಿದ್ದರು. ಆತ ತನ್ನ ಫೇಸ್‍ಬುಕ್‍ನಲ್ಲಿ ಶಾಪಿಂಗ್ ಹಾಗೂ ಗೆಳತಿಯೊಂದಿಗೆ ಪ್ರವಾಸ ಹೋಗುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದನು. ಇದನ್ನು ನಿರಂತರವಾಗಿ ನೋಡುತ್ತಿದ್ದ ಆರೋಪಿ ಡೊಂಗ್ರೆ ಅಸೂಯೆ ಪಟ್ಟಿದ್ದು, ಆತ ರಹಸ್ಯವಾಗಿ ಅಕ್ರಮ ವ್ಯವಹಾರದ ಮೂಲಕ ಹಣ ಸಂಪಾದಿಸುತ್ತಿರಬೇಕು. ಅದಕ್ಕೆ ಹಣವನ್ನು ತುಂಬಾ ಖರ್ಚು ಮಾಡುತ್ತಿದ್ದಾನೆ. ಹೀಗಾಗಿ ಆತನ ವ್ಯವಹಾರ ರಹಸ್ಯವನ್ನು ತಿಳಿದುಕೊಳ್ಳಲು ಆರೋಪಿ ಚುನಾಟ್ಕರ್ ಮತ್ತು ಖಾನ್ ಸಹಾಯದಿಂದ ಅಪ್ರಾಪ್ತನನ್ನು ಅಪಹರಿಸುವ ಸಂಚು ರೂಪಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಅದರಂತೆಯೇ ಡೋಂಗ್ರೆ ನಾಗ್ಪುರದ ಧಂತೋಲಿ ಗಾರ್ಡನ್ ಪ್ರದೇಶದ ಬಳಿ ಅಪ್ರಾಪ್ತನನ್ನು ಬರುವಂತೆ ಹೇಳಿದ್ದಾನೆ. ಅಲ್ಲಿಗೆ ಬರುತ್ತಿದ್ದಂತೆ ಆತನನ್ನು ಕಾರಿನಲ್ಲಿ ರಾಮದಾಸ್ಪೆತ್ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚುನಾಟ್ಕರ್ ಮತ್ತು ಖಾನ್ ಪೊಲೀಸರಂತೆ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ಅಪ್ರಾಪ್ತನನ್ನು ನಾಗ್ಪುರದ ವಾಡಿ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚುನಾಟ್ಕರ್ ಮತ್ತು ಖಾನ್ ಆತನಿಗೆ ಥಳಿಸಿ ತಮ್ಮ ವ್ಯವಹಾರದ ಬಗ್ಗೆ ತಿಳಿಸುವಂತೆ ಒತ್ತಾಯಿಸಿದ್ದಾರೆ.
ಅದೃಷ್ಟವಶಾತ್ ನಾಗ್ಪುರದ ವಾಡಿ ಹತ್ತಿರದ ಪೊಲೀಸ್ ಠಾಣೆಯ ಇಬ್ಬರು ಬೀಟ್ ಕಾನ್‍ಸ್ಟೆಬಲ್‍ಗಳು ಅವರನ್ನು ಗುರುತಿಸಿ ಅಪ್ರಾಪ್ತನನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.