ಚೆನ್ನೈ: ತಮಿಳುನಾಡಿನ ವೆಲ್ಲೂರಿನಲ್ಲಿ ತಂದೆಯೊಬ್ಬರು ತಮ್ಮ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ಪತ್ರಕ್ಕೆ ಮೋದಿ ಅವರ ಪ್ರತಿಕ್ರಿಯೆ ನೀಡಿದ್ದು, ಇದನ್ನು ಕಂಡು ವಧು-ವರರು ಸೇರಿದಂತೆ ಇಡೀ ಕುಟುಂಬ ಅಚ್ಚರಿಗೊಂಡಿದೆ.
ವೆಲ್ಲೂರಿನ ನಿವೃತ್ತ ಪ್ರಾದೇಶಿಕ ವೈದ್ಯಕೀಯ ಸಂಶೋಧಕ ಟಿ.ಎಸ್ ರಾಜಶೇಖರನ್ ಅವರು ಸೆಪ್ಟೆಂಬರ್ 11ರಂದು ನಡೆಯುವ ತಮ್ಮ ಮಗಳ ಮದುವೆಗೆ ಪತ್ರ ಬರೆಯುವ ಮೂಲಕ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ರಾಜಶೇಖರನ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಮೋದಿ, “ನಿಮ್ಮ ಮಗಳು ಡಾ. ರಾಜಶ್ರೀ ಅವರು ಡಾ. ಸುದರ್ಶನ್ ಅವರ ಜೊತೆ ಮದುವೆಯಾಗುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಈ ಮಹತ್ವದ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಉತ್ತರಿಸಿದ್ದರು.
ಮದುವೆಗೆ ಆಹ್ವಾನಿಸಿದಕ್ಕೆ ಧನ್ಯವಾದ ಹೇಳುವುದರ ಜೊತೆಗೆ ಮೋದಿ ಅವರು ನವಜೋಡಿಗೆ ಸಮೃದ್ಧಿ ಮತ್ತು ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿ, ಅವರು ಖುಷಿ ಹಾಗೂ ಸಂತೋಷದಿಂದ ತಮ್ಮ ಜೀವನ ನಡೆಸಲಿ ಎಂದು ನಾನು ಬಯಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಮೋದಿ ಅವರು ಪತ್ರದ ಕೊನೆಯಲ್ಲಿ ನವಜೋಡಿಯ ವೈವಾಹಿಕ ಜೀವನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಟಿ.ಎಸ್ ರಾಜಶೇಖರನ್ ಅವರ ಕುಟುಂಬ, ಸ್ನೇಹಿತರು ಮತ್ತು ಮದುವೆಗೆ ಹಾಜರಾಗಲಿರುವ ಎಲ್ಲರಿಗೂ ಅವರು ತಮ್ಮ ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರಿಂದ ಪ್ರತಿಕ್ರಿಯೆ ದೊರೆತ ನಂತರ ರಾಜಶೇಖರನ್ ಹಾಗೂ ಅವರ ಕುಟುಂಬಸ್ಥರು ಸಂತೋಷಗೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ಸ್ಥಳೀಯ ವರದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಪ್ರಧಾನಿ ಅವರ ಪತ್ರ ನಮಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 11ರಂದು ಮೋದಿ ಮದುವೆಗೆ ಆಗಮಿಸಿದ್ದರೆ ಕುಟುಂಬಸ್ಥರು ಅವರ ಜೊತೆ ಫೋಟೋ ತೆಗೆದುಕೊಳ್ಳಲು ನಿರ್ಧರಿಸಿದ್ದರು.