ಚಿತ್ರದುರ್ಗ: ಕಾಡಾನೆ ಹಿಂಡು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಪೊದೆಯಲ್ಲಿ ಪ್ರತ್ಯಕ್ಷವಾಗಿದ್ದ ಕಾಡಾನೆ ಹಿಂಡು ನಂತರ ಗ್ರಾಮಕ್ಕೆ ನುಗ್ಗಿದೆ. ಈ ವೇಳೆ ಗ್ರಾಮದ ರವಿ(45) ಎಂಬವರ ಮೇಲೆ ದಾಳಿ ನಡೆಸಿ ಅವರ ಹೊಟ್ಟೆಗೆ ದಂತದಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ತಕ್ಷಣ ಅವರನ್ನು ಗ್ರಾಮಸ್ಥರು ಚಿಕಿತ್ಸೆಗಾಗಿ ಸ್ಥಳೀಯ ನಾಯಕನ ಹಟ್ಟಿ ಪ್ರಾಥಮಿಕ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಸದ್ಯ ಆನೆಗಳ ಹಿಂಡು ಗ್ರಾಮದ ಹೊರ ವಲಯದ ಜಮೀನಿನಲ್ಲಿ ಬಿಡುಬಿಟ್ಟಿದ್ದು, ಆನೆ ನೋಡಲು ಸುತ್ತ ಮುತ್ತಲಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಈ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆನೆಗಳು ಗ್ರಾಮವನ್ನು ಪ್ರವೇಶ ಮಾಡದಂತೆ ತಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿ ಪ್ರದೇಶಕ್ಕೆ ಈ ಪ್ರದೇಶವು ಹೊಂದಿಕೊಂಡಿರುವ ಕಾರಣ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷವಾಗಿದೆ. ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.