ಮುಂಬೈ: ಭಾರತೀಯ ಕ್ರಿಕೆಟ್ ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿರಿಯ ಪುತ್ರಿ ಸಾರಾಗೆ ನನ್ನನ್ನು ಮದುವೆಯಾಗು ಇಲ್ಲದಿದ್ದರೆ ಅಪಹರಿಸುತ್ತೇನೆ ಎಂದು ಬೆದರಿಕ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ದೇವ್ ಕುಮಾರ್ ಮೈಟಿ ಎಂದು ಗುರುತಿಸಲಾಗಿದೆ. ಈತ ಪಶ್ಚಿಮ ಬಂಗಾಳ ಪುರ್ಬಾ ಮೆಡಿನಿಪುರ್ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. 32 ವರ್ಷದ ಈತ ಇತ್ತೀಚೆಗೆ ಹಲವು ದಿನಗಳಿಂದ ಸಾರಾ ತೆಂಡೂಲ್ಕರ್ ಕುರಿತು ಪೋಸ್ಟ್ ಗಳನ್ನು ಮತ್ತು ಅವಹೇಳನಕಾರಿ ಕಮೆಂಟ್ ಗಳನ್ನು ಹಾಕುತ್ತಿದ್ದನು ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಸಾರಾಗೆ ನನ್ನನ್ನು ಮದುವೆಯಾಗು ಇಲ್ಲವಾದರೆ ನಿನ್ನನ್ನು ಅಪಹರಣ ಮಾಡುತ್ತೇನೆ ಎಂದು ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಸಚಿನ್ ಅವರ ಮುಂಬೈ ಮನೆ ಮುಂದೆ ಬಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ದೇವ್ ಕುಮಾರ್ ಮೈಟಿ ಎಂಬಾತನನ್ನು ಬಂಧಿಸಿದ್ದಾರೆ.
Advertisement
ನಾನು ಸಾರಾಳನ್ನು ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಾಗ ಟಿವಿಯಲ್ಲಿ ನೋಡಿದ್ದೆ. ಆಗ ಸಾರಾಳ ಮೇಲೆ ಪ್ರೀತಿ ಆಯಿತು. ನಾನು ಆಕೆಯನ್ನು ಮದುವೆ ಮಾಡಿಕೊಳ್ಳುತ್ತೇನೆ. ತೆಂಡೂಲ್ಕರ್ ಮನೆಗೆ ಸುಮಾರು 20 ಬಾರಿ ಕರೆ ಮಾಡಿದ್ದೇನೆ. ಆದರೆ ನಾನು ಇದುವರೆಗೂ ಸಚಿನ್ ಅವರನ್ನು ನೋಡಿಲ್ಲ ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.
Advertisement
ಆರೋಪಿ ದೇವ್ ಒಬ್ಬ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದಾನೆ. ಅಷ್ಟೇ ಅಲ್ಲದೇ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾನೆ ಎಂದು ಆರೋಪಿಯ ಕುಟುಂಬಸ್ಥರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಅವನು ಹೇಗೆ ಸಿಲುಕಿಕೊಂಡಿದ್ದಾನೆ ಎಂದು ನಮಗೆ ತಿಳಿದಿಲ್ಲ. ಇತ್ತೀಚೆಗೆ ಅವರ ತಂದೆಯನ್ನು ಕಳೆದುಕೊಂಡಿದ್ದಾನೆ. ಕಳೆದ 8 ವರ್ಷಗಳಿಂದ ಅವನ ಮಾನಸಿಕ ಸ್ಥಿತಿ ಸರಿಯಿಲ್ಲ. ಆದ್ದರಿಂದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾನೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಆರೋಪಿಯಿಂದ ಒಂದು ಡೈರಿಯನ್ನು ವಶಪಡಿಸಿಕೊಂಡಿದ್ದು, ಆ ಡೈರಿಯಲ್ಲಿ ಸಾರಾ ಅವರನ್ನು ನನ್ನ ಹೆಂಡತಿ ಎಂದು ಬರೆದುಕೊಂಡಿದ್ದಾನೆ. ಸಚಿನ್ ಅವರ ಮನೆಯ ಲ್ಯಾಂಡ್‍ಲೈನ್ ನಂಬರ್ ಹೇಗೆ ಪಡೆದಿದ್ದಾನೆ ಎಂದು ಇದುವರೆಗೂ ನಿಗೂಢವಾಗಿದೆ. ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೋ ಇಲ್ಲವೋ ಎಂದು ತಿಳಿದಿಲ್ಲ. ಆದ್ದರಿಂದ ವೈದ್ಯಕೀಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಸಾರಾ ತೆಂಡೂಲ್ಕರ್ ಆರೋಪಿಯ ವಿರುದ್ಧ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಕರೆ ಬಂದಿದ್ದ ಟೆಲಿಫೋನ್ ಟವರ್ ಗಳನ್ನು ಪರಿಶೀಲಿಸಿ ಮೊಬೈಲ್ ನಂಬರ್ ಟ್ರಾಪ್ ಮಾಡಿ ಬಂಧಿಸಿದ್ದಾರೆ.