ಚೆನ್ನೈ: ವಾಹನ ದಾಖಲೆಯ ಬಗ್ಗೆ ಸುಳ್ಳು ಹೇಳಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬರೋಬ್ಬರಿ 50 ಮಹಿಳೆಯರ ಮೇಲಿನ ಅತ್ಯಾಚಾರ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸರು ವಾಹನ ಪರಿಶೀಲನೆ ಮಾಡುವಾಗ ಆತನ ಮೊಬೈಲ್ ಫೋನ್ ತೆಗೆದುಕೊಂಡು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಪೊಲೀಸರು ಬಂಧಿಸಿ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಚೆನ್ನೈ ಟ್ರಾಫಿಕ್ ಪೊಲೀಸರು ಎಂದಿನಂತೆ ವಾಹನ ಪರಿಶೀಲನೆ ಮಾಡುತ್ತಿದ್ದಾಗ ಸವಾರನೊಬ್ಬನನ್ನು ನಿಲ್ಲಿಸುತ್ತಾರೆ. ಆತನ ಬೈಕಿನ ದಾಖಲಾತಿಯನ್ನು ಪರಿಶೀಲನೆ ನಡೆಸಿದಾಗ ಆತನಲ್ಲಿದ್ದ ದಾಖಲೆಗಳಿಗೂ ಗುರುತಿನ ಪುರಾವೆಗಳಿಗೂ ತಾಳೆ ಆಗುತ್ತಿರಲಿಲ್ಲ. ನಂತರ ಪೊಲೀಸರು ಆತನನ್ನು ಪ್ರಶ್ನಿಸಿದಾಗ ಅದಕ್ಕೂ ಸೂಕ್ತವಾದ ಉತ್ತರ ಬರಲಿಲ್ಲ.
ಸವಾರನ ಈ ವರ್ತನೆಯಿಂದ ಪೊಲೀಸರಿಗೆ ಅನುಮಾನ ಬಂದು ಮೊಬೈಲ್ ಫೋನ್ ಪರಿಶೀಲನೆ ನಡೆಸಿದ್ದಾರೆ. ಫೋನಿನಲ್ಲಿ ಇದ್ದ ವಿಡಿಯೋ ಗಳನ್ನು ನೋಡಿ ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ. ಆತನ ಫೋನಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ವಿಡಿಯೋ ರೆಕಾರ್ಡ್ ಆಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ 50 ಅತ್ಯಾಚಾರದ ವಿಡಿಯೋಗಳು ಆತನ ಫೋನಿನಲ್ಲಿ ಸೆರೆಯಾಗಿದ್ದನ್ನು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.
ಈ ವಿಚಾರ ಗೊತ್ತಾದ ತಕ್ಷಣವೇ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ, ಮೊದಲಿಗೆ ಮನೆಯಲ್ಲಿ ಒಂಟಿಯಾಗಿ ಮಹಿಳೆಯರು ಇರುವುದನ್ನು ಖಚಿತ ಪಡಿಸಿಕೊಂಡು ಅವರ ಮನೆಗೆ ಹೋಗಿ ಅತ್ಯಾಚಾರ ಎಸಗುತ್ತಿದ್ದೆ. ಅಷ್ಟೇ ಅಲ್ಲದೇ ನನ್ನ ಕೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆ ಎಂದು ಬಾಯಿಬಿಟ್ಟಿದ್ದಾನೆ.
ಸದ್ಯಕ್ಕೆ ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಹಿಂದೆಯೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆದರೆ ಸರಿಯಾದ ಸಾಕ್ಷ್ಯ ಪೂರಾವೆಗಳಿಲ್ಲದೇ ಮೂರು ತಿಂಗಳಲ್ಲಿಯೇ ಜಾಮೀನು ಪಡೆದುಕೊಂಡಿದ್ದನು. ಆದ್ದರಿಂದ ಈಗ ಸಂತ್ರಸ್ತೆಯರ ಹೇಳಿಕೆಯನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಆಶ್ಚರ್ಯ ಸಂಗತಿ ಎಂದರೆ ಈತನಿಂದ ಅತ್ಯಾಚಾರಕ್ಕೋಳಗಾಗಿರುವ 50 ಮಹಿಳೆಯರಲ್ಲಿ ಒಬ್ಬರು ಕೂಡ ಭಯದಿಂದ ಈತನ ವಿರುದ್ಧ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ. ಇದನ್ನೇ ಆರೋಪಿ ಉಪಯೋಗಿಸಿಕೊಂಡು ವಿಡಿಯೋವನ್ನು ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿ ಅವರ ಮೇಲೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv