ಕೊಪ್ಪಳ: ಗಂಗಾವತಿಯಲ್ಲಿ ವಿವಾಹಿತ ಜೋಡಿ ಹಕ್ಕಿಗಳಿಗೆ ಮಹಿಳೆಯ ಚಿಕ್ಕಪ್ಪನೇ ವಿಲನ್ ಆಗಿದ್ದಾನೆ.
ಕೊಪ್ಪಳದ ಗಂಗಾವತಿಯ ದ್ರಾಕ್ಷಾಯಿಣಿಗೆ ತಮ್ಮ ಮನೆಯ ಕಾರ್ ಡ್ರೈವರ್ ಕೊಟೇಶ್ವರ್ ರಾವ್ ಜೊತೆ ಪ್ರೇಮಾಂಕುರ ಆಗಿತ್ತು. ಇವರಿಬ್ಬರ ಲವ್ವಿ-ಡವ್ವಿ ವಿಷಯ ಮನೆಯಲ್ಲಿ ಗೊತ್ತಾಗಿ ಇಬ್ಬರನ್ನೂ ಬೇರೆ ಮಾಡಿದ್ದರು. ಯುವತಿ ಮನೆಯವರು ಯುವಕನ ಮನೆಯವರಿಗಿಂತ ಶ್ರೀಮಂತ ಮನೆತನದವರು ಮತ್ತು ಇಬ್ಬರದ್ದೂ ಜಾತಿ ಬೇರೆ ಬೇರೆ ಆಗಿರೋದಕ್ಕೆ ಮನೆಯಲ್ಲಿ ಇಬ್ಬರ ಪ್ರೇಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮನೆಯವರ ವಿರೋಧ ಕಟ್ಟಿಕೊಂಡು ಯುವತಿ ಕಾರ್ ಡ್ರೈವರ್ ಜೊತೆ 2018ರಲ್ಲಿ ಪ್ರೇಮ ವಿವಾಹವಾಗಿದ್ದಾಳೆ. ವಿವಾಹವಾದ ನಂತರ ಆಕೆಯ ಚಿಕ್ಕಪ್ಪ ಹೇಮಂತ್ ರಾಜ್ ದಿನನಿತ್ಯ ವಿವಾಹಿತ ಪ್ರೇಮಿಗಳಿಗೆ ಟಾರ್ಚರ್ ನೀಡಲು ಆರಂಭಿಸಿದ್ದಾನೆ. ವಿವಾಹವಾದ ಬಳಿಕ ಪ್ರೇಮಿಗಳನ್ನು ನೆಮ್ಮದಿಯಿಂದ ಇರಲು ಕೂಡ ಬಿಟ್ಟಿಲ್ಲ ಅವರು ಎಲ್ಲೇ ಹೋದರು ಅಲ್ಲಿಗೆ ಹೋಗಿ ಜೀವ ಬೆದರಿಕೆ ಹಾಕುತ್ತಾನೆ. ಹೊರಗಡೆ ಒಡಾಡಲು ಕೂಡ ಬಿಡದೆ ಅಲ್ಲಲ್ಲಿ ಹುಡುಗರನ್ನು ಇಟ್ಟು ಪ್ರೇಮಿಗಳಿಗೆ ಟಾರ್ಚರ್ ಕೊಡುತ್ತಿದ್ದನು.
ಇದರಿಂದ ಬೆಸತ್ತ ವಿವಾಹಿತ ಪ್ರೇಮಿಗಳು ಕೊಪ್ಪಳದ ಎಸ್‍ಪಿ ಕಚೇರಿಗೆ ಭೇಟಿ ನೀಡಿ ಎಸ್‍ಪಿ ಮುಂದೆ ಚಿಕ್ಕಪ್ಪ ಹೇಮಂತ್‍ರಾಜ್ ನಿಂದ ತಮಗಾದ ಹಿಂಸೆಯನ್ನು ಮತ್ತು ಜೀವ ಬೆದರಿಕೆ ಹಾಕಿರುವುದನ್ನು ಹೇಳಿಕೊಂಡಿದ್ದಾರೆ. ಇದೀಗ ಪೊಲೀಸ್ ರಕ್ಷಣೆ ಅನಿವಾರ್ಯತೆ ವಿವಾಹಿತ ಪ್ರೇಮಿಗಳಿಗೆ ಎದುರಾಗಿದೆ. ಆದರೂ ಚಿಕ್ಕಪ್ಪನ ಭಯ ಮಾತ್ರ ಇನ್ನೂ ಹಾಗೆ ಇದೆ. ಪೊಲೀಸ್ ನವರು ನಮಗೆ ಎಲ್ಲಿ ತನಕ ರಕ್ಷಣೆ ಕೊಡೋಕೆ ಆಗುತ್ತೆ. ಇವರು ಇಲ್ಲದ ಸಮಯದಲ್ಲಿ ಚಿಕ್ಕಪ್ಪ ನನ್ನನ್ನು ಸಾಯಿಸಲು ಕೂಡ ರೆಡಿಯಾಗಿದ್ದಾನೆ ಎಂದು ತಮಗಿರುವ ಭಯವನ್ನು ವ್ಯಕ್ತಪಡಿಸಿದ್ದಾರೆ.