– ನನಗೆ ಮದುವೆ ಯಾವಾಗ ಎಂದು ಕೇಳ್ತಿದ್ದ
– ಮಗನ ಸಂತಸವೇ ನಮಗೆ ಮುಖ್ಯ
ಗಾಂಧಿನಗರ: ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಆತನ ಕನಸನ್ನು ತಂದೆ ನನಸು ಮಾಡಿದ ಘಟನೆಯೊಂದು ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ.
ಅಜಯ್ ಬಾರೋಟ್ ಪುಟ್ಟ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ ಗುಜರಾತ್ ಸಂಪ್ರದಾಯದಂತೆ ಇದೀಗ ಅಜಯ್ ಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.
Advertisement
Advertisement
ಇತರ ಮದುವೆಯಂತೆ ಅಜಯ್ ಮದುವೆಯ ಹಿಂದಿನ ದಿನ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮವೂ ಇತ್ತು. ಈ ಕಾರ್ಯಕ್ರಮದಲ್ಲಿ ಅಜಯ್ ನೆಚ್ಚಿನ ಗೆಳೆಯರು ಹಾಗೂ ಸಂಬಂಧಿಕರು ಮಾತ್ರ ಭಾಗಿಯಾಗಿದ್ದರು. ಮದುವೆಯಂದು ಚಿನ್ನದ ಬಣ್ಣದ ಶೆರ್ವಾನಿ, ಗುಲಾಬಿ ಬಣ್ಣದ ರುಮಾಲು, ಹೂಮಾಲೆಯನ್ನು ಅಜಯ್ ಧರಿಸಿದ್ದನು. ಬಳಿಕ ಮದುಮಗ ಕುದುರೆಯ ಮೇಲೆ ಕುಳಿತು ಮಂಟಪಕ್ಕೆ ತೆರಳಿದನು. ಈ ಮೆರವಣಿಗೆಯಲ್ಲಿ ಸುಮಾರು 200 ಮಂದಿ ಭಾಗವಹಿಸಿದ್ದು, ಗುಜರಾತಿ ಮ್ಯೂಸಿಕ್ ಹಾಗೂ ಬ್ಯಾಂಡ್ ಸೆಟ್ ಗೆ ತಕ್ಕಂತೆ ಕುಣಿಯುವ ಮೂಲಕ ವರನನ್ನು ಮಂಟಪಕ್ಕೆ ಕರೆತರಲಾಯಿತು. ಕಮ್ಯೂನಿಟಿ ಹಾಲ್ ನಲ್ಲಿ ನಡೆದ ಈ ಶುಭಸಮಾರಂಭದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು.
Advertisement
Advertisement
ಮಗನ ಮದುವೆಯ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಜಯ್ ತಂದೆ, ನನ್ನ ಮಗ ಅಂಗವೈಕಲ್ಯನಾಗಿದ್ದು, ಚಿಕ್ಕಂದಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ. ಈತ ಕೆಲವು ಮದುವೆಗಳಿಗೆ ತೆರಳಿ ಮೆರವಣಿಗೆಯಲ್ಲಿ ಭಾಗವಹಿಸಿ ಸಂತಸ ಪಡುತ್ತಿದ್ದನು. ಅಲ್ಲದೆ ತನ್ನ ಮದುವೆಯ ಬಗ್ಗೆಯೂ ನನ್ನಲ್ಲಿ ವಿಚಾರಿಸುತ್ತಿದ್ದನು. ಆದರೆ ಆತನ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿರಲಿಲ್ಲ. ಯಾಕಂದರೆ ಆತನಿಗೆ ತಕ್ಕುದಾದ ಸಂಗಾತಿಯನ್ನು ಹುಡುಕಲು ನಮ್ಮಿಂದ ಸಾಧ್ಯವಿಲ್ಲ ಎಂಬುದು ತಿಳಿದಿತ್ತು. ಹೀಗಾಗಿ ನಾನು ನನ್ನ ಕುಟುಂಬಸ್ಥರ ಜೊತೆ ಮಗನ ಮದುವೆಯ ಬಗ್ಗೆ ಮಾತುಕತೆ ನಡೆಸಿದೆ. ಈ ವೇಳೆ ವಧುವಿಲ್ಲದೆ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವುದಾಗಿ ತೀರ್ಮಾನಿಸಿದೆವು. ಈ ಮೂಲಕ ಆತನ ಕನಸನ್ನು ನನಸು ಮಾಡುವ ನಿರ್ಧಾರಕ್ಕೆ ಬಂದೆವು. ಇದೀಗ ಮಗನಿಗೆ ಮದುವೆ ಮಾಡುವ ಮೂಲಕ ಆತನ ಕನಸು ಈಡೇರಿಸಿದ್ದೇವೆ. ಈ ಮೂಲಕ ಸಮಾಜದ ಬಗ್ಗೆ ಚಿಂತಿಸದೆ ನನ್ನ ಮಗನ ಆಸೆಯನ್ನು ನೆರವೇರಿಸಿದ್ದೇನೆ ಎಂಬ ಸಂತಸ ನನಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಜಯ್ ಚಿಕ್ಕಪ್ಪ ಮಾತನಾಡಿ, ಮ್ಯೂಸಿಕ್ ಕೇಳಿ ಡ್ಯಾನ್ಸ್ ಮಾಡುವುದು ಅಂದರೆ ಅಜಯ್ ಗೆ ತುಂಬಾ ಇಷ್ಟ. ಇದರಿಂದ ಆತನ ಮುಖದಲ್ಲಿ ನಗು ನೋಡುತ್ತೇವೆ. ನಮ್ಮ ಗ್ರಾಮದಲ್ಲಿ ಯಾರೇ ಮದುವೆಯಾದ್ರೂ ಆ ಕಾರ್ಯಕ್ರಮಕ್ಕೆ ಅಜಯ್ ಯಾವುದೇ ಕಾರಣಕ್ಕೂ ಗೈರಾಗುತ್ತಿರಲಿಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ನನ್ನ ಮಗನ ವದುವೆ ಇತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜಯ್, ತನ್ನ ಮದುವೆಯ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದನು. ಸದ್ಯ ನನ್ನ ಅಣ್ಣ(ಅಜಯ್ ತಂದೆ) ಮಗನ ಆಸೆಯಂತೆ ಇದೀಗ ಆತನಿಗೆ ಮದುವೆ ಮಾಡಿಸಿದ್ದಾರೆ. ನಾವು ಕೂಡ ಇತರ ಮದುವೆಯಂತೆ ಮೆರವಣಿಗೆಯ ಮೂಲಕ ಅದ್ಧೂರಿಯಾಗಿಯೇ ಕಾರ್ಯಕ್ರಮವನ್ನು ಭಾಗಿಯಾಗಿದ್ದೇವೆ. ಆದರೆ ಇಲ್ಲಿ ವಧು ಮಾತ್ರ ಇರಲಿಲ್ಲ ಅಷ್ಟೆ ಅಂದರು.
ಮದುವೆ ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಮಾಡಿ ಸಂಬಂಧಿಕರಿಗೆ ನೀಡಿದ್ದೇವೆ. ಗುಜರಾತಿನ ಸಂಪ್ರದಾಯದಂತೆ ಪುರೋಹಿತರ ಮೂಲಕವೇ ಕಾರ್ಯಕ್ರಮ ನೆರವೇರಿದೆ. ಒಟ್ಟಿನಲ್ಲಿ ಇಲ್ಲಿ ಮಗನ ಸಂತಸವೇ ನಮಗೆ ಮುಖ್ಯವಾಗಿದೆ. ಆತನ ನಗು ಮುಖಕ್ಕಿಂತ ನಮಗೆ ಯಾವುದು ಮುಖ್ಯವಾಗಿರಲಿಲ್ಲ ಎಂದು ಅಜಯ್ ಅಂಕಲ್ ತಿಳಿಸಿದರು.