ಹೈದರಾಬಾದ್: ಹಾಡಹಗಲೇ ವ್ಯಕ್ತಿಯೊಬ್ಬರನ್ನ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಂದ ಘಟನೆ ಇಂದು ಬೆಳಗ್ಗೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಕಡಪಾ ಜಿಲ್ಲೆಯ ಪ್ರೊದ್ದುಟೂರಿನ ಕೋರ್ಟ್ ವೊಂದರ ಬಳಿಯೇ ಈ ಆಘಾತಕಾರಿ ಘಟನೆ ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು 32 ವರ್ಷದ ಮಾರುತಿ ರೆಡ್ಡಿ ಎಂದು ಗುರುತಿಸಲಾಗಿದೆ. ಮಾರುತಿ ಅವರು ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ಕೊಲೆ ನಡೆದಿದೆ.

ಕೆಲ ಸಾರ್ವಜನಿಕರು ಇದನ್ನ ನೋಡಿ ಭಯಗೊಂಡು ಓಡಿದ್ರೆ ಇನ್ನೂ ಕೆಲವರು ಕಣ್ಣ ಮುಂದೆಯೇ ವ್ಯಕ್ತಿ ಕೊಲೆಯಾಗೋದನ್ನ ನಿಂತು ನೋಡಿದ್ದಾರೆ. ಈ ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲೂ ಕೂಡ ಘಟನೆಯ ದೃಶ್ಯ ಸೆರೆಯಾಗಿದೆ.
ಈ ಭಯಾನಕ ಹತ್ಯೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗ್ತಿದೆ. ಮಾರುತಿ ಅವರನ್ನ ಕೊಲೆಗೈದ ನಾಲ್ವರಲ್ಲಿ ಒಬ್ಬರು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಸಂಬಂಧಿ ಎಂದು ವರದಿಯಾಗಿದೆ.
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.





