ಗಾಂಧಿನಗರ: ಗುಜರಾತ್‍ನ (Gujarat) ದಾಹೋದ್ ಲೋಕಸಭಾ ಕ್ಷೇತ್ರದ ಪಾರ್ಥಂಪುರ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಇನ್‍ಸ್ಟಾಗ್ರಾಂನಲ್ಲಿ ಲೈವ್ ಮಾಡಿದ ಕಾರಣಕ್ಕೆ ಮೇ 11 ರಂದು ಮರು ಮತದಾನಕ್ಕೆ (Repolling) ಚುನಾವಣಾ ಆಯೋಗ (ECI) ಆದೇಶಿಸಿದೆ.
ಮೇ 7 ರಂದು ನಡೆದಿದ್ದ ಚುನಾವಣೆಯಲ್ಲಿ (Lok sabha Elections 2024) ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಲೈವ್ ಸ್ಟ್ರೀಮ್ ಮಾಡಿದ್ದ. ಅದರ ವೀಡಿಯೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಚುನಾವಣಾ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ಗುಜರಾತ್‍ನ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮತದಾನದ ವೀಡಿಯೋ ವೈರಲ್ ಆಗುತ್ತಿದ್ದಂತೆ, ವೀಕ್ಷಕರು ಸಲ್ಲಿಸಿದ ವರದಿಯನ್ನು ಗಣನೆಗೆ ತೆಗೆದುಕೊಂಡು ಮತದಾನವನ್ನು ಚುನಾವಣಾ ಆಯೋಗವು ಅಸಿಂಧು ಎಂದು ಘೋಷಿಸಿತು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 58(2)ರ ಅಡಿಯಲ್ಲಿ ಮೇ 7 ರಂದು ಮತಗಟ್ಟೆಯಲ್ಲಿ ನಡೆದ ಮತದಾನವನ್ನು ಅನೂರ್ಜಿತ ಎಂದು ಘೋಷಿಸಿಸಲಾಗಿದ್ದು, ಮೇ 11 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತಗಟ್ಟೆಯಲ್ಲಿ ಮರು ಮತದಾನವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಗುಜರಾತ್‍ನ 26 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಮಂಗಳವಾರ ಮೂರನೇ ಹಂತದ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಸೂರತ್‍ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಗೆಲುವು ಸಾಧಿಸಿದ್ದರು.
ವೀಡಿಯೋ ಮಾಡಿರುವ ಆರೋಪಿ ವಿಜಯ್ ಭಾಭೋರ್ ಐದು ನಿಮಿಷಗಳ ಕಾಲ ಮತಗಟ್ಟೆಯಲ್ಲಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಮಾಡಿದ್ದಾರೆ. ಅಲ್ಲದೆ ಇತರ ಇಬ್ಬರು ಮತದಾರರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆತನನ್ನು ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಮಗ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.