ಲಕ್ನೋ: ದೇಶಾದ್ಯಂತ ತ್ರಿವಳಿ ತಲಾಖ್ ವಿರುದ್ಧ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ವ್ಯಕ್ತಿಯೊಬ್ಬ ವರದಕ್ಷಿಣೆ ನೀಡಿಲ್ಲ ಎಂದು ಪತ್ನಿಗೆ ತಲಾಖ್ ಹೇಳಿದ್ದು ಮಾತ್ರವಲ್ಲದೇ ನಾದಿನಿ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಡಿಯೋಬಾಂಡ್ ಪಠಾಣ್‍ಪುರ ಕಾಲೊನಿಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ನೂರ್‍ಜಹನ್ ಬೇಗಂ (27) ಭಾನುವಾರ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
Advertisement
Advertisement
ಏನಿದು ಪ್ರಕರಣ?
ಕಳೆದ ಮೂರು ವರ್ಷಗಳ ಹಿಂದೆ ನೂರ್‍ಜಹನ್ ತಮ್ಮ ಪಕ್ಕದ ನಿವಾಸಿ ಅರ್ಷದ್ ಅಹ್ಮದ್‍ನ ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಮದುವೆಯ ಬಳಿಕ ಪತಿ ವರದಕ್ಷಿಣೆ ತರುವಂತೆ ಪ್ರತಿದಿನ ಪೀಡಿಸುತ್ತಿದ್ದನು. ನನ್ನ ತಂದೆಯವರು ಆತನ ಬೇಡಿಕೆಗಳನ್ನು ಈಡೇರಿಸುತ್ತಲೇ ಬಂದಿದ್ದರು. ಆದರೆ ಡಿಸೆಂಬರ್ 7ರಂದು ಅರ್ಷದ್ ನನ್ನ ಜೊತೆ ಕ್ರೂರವಾಗಿ ನಡೆದುಕೊಂಡು ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ್ದ. ಈ ವೇಳೆ ನನ್ನ ಅದೃಷ್ಟ ಚೆನ್ನಾಗಿ ಇದ್ದರಿಂದ ನೆರೆಹೊರೆಯವರು ಬಂದು ನನ್ನನ್ನು ಕಾಪಾಡಿದರು. ನಂತರ ಪತಿ ನನಗೆ ತಲಾಖ್ ನೀಡಿ, ನನ್ನ ಆಭರಣಗಳನ್ನು ತೆಗೆದುಕೊಂಡು ನನ್ನ ತಂಗಿಯ ಜೊತೆ ಓಡಿ ಹೋಗಿದ್ದಾನೆ ಎಂದು ನೂರ್‍ಜಹನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
ಈ ಸಂಬಂಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಯೋಬಾಂಡ್ ಪೊಲೀಸರ ಬಳಿ ಮನವಿ ಮಾಡಿದ್ದೆ. ಆದರೆ ಅವರು ಪ್ರಕರಣ ದಾಖಲಿಸಲು ಒಪ್ಪಿಕೊಳ್ಳಲಿಲ್ಲ ಎಂದು ನೂರ್‍ಜಹನ್ ಆರೋಪಿಸಿದ್ದಾರೆ.
Advertisement
ಮಹಿಳೆ ದೂರು ನೀಡಿದ್ದು, ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ತನಿಖೆ ಆದ ಮೇಲೆ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಹರಾನ್ಪುರದ ಸೀನಿಯರ್ ಸೂಪರಿಟೆಂಡೆಂಟ್ ಪೊಲೀಸ್ ಬಬ್ಲೂ ಕುಮಾರ್ ಹೇಳಿದ್ದಾರೆ.