– ಯುವತಿಯ ಕುಟುಂಬಕ್ಕೆ ಬಹಿಷ್ಕಾರ
ದಾವಣಗೆರೆ: ಮಾತುಬಾರದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಯುವಕನಿಗೆ ಶಿಕ್ಷೆ ನೀಡಿ ಮದುವೆ ಮಾಡಿಸುವ ಬದಲು ಯುವತಿಯ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಅದೇ ಗ್ರಾಮದ ಯುವಕ ಜಮ್ಮಣ್ಣ ಎಂಬವನು ಮೂಗ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿ ಗರ್ಭಿಣಿ ಮಾಡಿದ್ದಾನೆ. ಯಾವಾಗ ಯುವತಿ ಗರ್ಭಿಣಿ ಎಂದು ತಿಳಿಯಿತೋ ಜಮ್ಮಣ್ಣ ತಲೆಮರೆಸಿಕೊಂಡಿದ್ದಾನೆ.
ನ್ಯಾಯಕ್ಕಾಗಿ ಯುವತಿಯ ಕುಟುಂಬ ಗ್ರಾಮದ ಮುಖಂಡರ ಮೊರೆ ಹೋದರೆ, ನ್ಯಾಯ ಕೊಡಿಸದೇ ಅವರ ಇಡೀ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ದನದ ಕೊಟ್ಟಿಗೆಯಲ್ಲಿ ಯುವತಿ ಜೀವನ ಮಾಡುತ್ತಿದ್ದು, ತನಗೆ ಮೋಸ ಮಾಡಿದ ಜಮ್ಮಣ್ಣನಿಗಾಗಿ ಕಾಯುತ್ತಾ ಕುಳಿತಿದ್ದಾಳೆ.
ನಾಲ್ಕು ತಿಂಗಳ ಗರ್ಭಿಣಿಯಾದ ಯುವತಿ ಮಳೆ ಗಾಳಿಯಲ್ಲೇ ಮಲಗಬೇಕಾದ ಹೀನಾಯ ಪರಿಸ್ಥಿತಿ ಇದೆ. ವಿಷಯ ತಿಳಿದ ಸ್ವಾಮಿ ವಿವೇಕಾನಂದ ಅಂಗವಿಕಲರ ಸಂಘದವರು ಗ್ರಾಮಕ್ಕೆ ಆಗಮಿಸಿದ ಯುವತಿಯ ಪರಿಸ್ಥಿತಿ ನೋಡಿ ಪೊಲೀಸ್ ಠಾಣೆಗೆ ದೂರು ನೀಡಿದರು.
ದೂರು ನೀಡಿದ್ರೂ ಯಾವುದೇ ತನಿಖೆ ನಡೆಸದೆ ರಾಜಕೀಯ ಒತ್ತಡಕ್ಕೆ ಮಣಿದು ಯುವತಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಜಗಳೂರು ಠಾಣಾ ಪೊಲೀಸರು ದೂರು ನೀಡಿದಾಗ ಬಂದು ಮಹಜರು ಮಾಡಿಕೊಂಡು ಹೋಗಿದ್ದೇ ವಿನಃ ಯುವಕನನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಕೂಡಲೇ ಅನ್ಯಾಯವಾದ ಯುವತಿಗೆ ನ್ಯಾಯ ಒದಗಿಸಬೇಕು ಇಲ್ಲವಾದರೆ ಪೊಲೀಸ್ ಠಾಣೆ ಹಾಗೂ ಯುವಕನ ಮನೆ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘದವರು ತಿಳಿಸಿದ್ದಾರೆ.
ಗರ್ಭಿಣಿಯ ಪಾಡು ಹೀನಾಯವಾಗಿದ್ದು, ತಮಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿ ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.