ಗಾಂಧಿನಗರ: ಕರು ಕೊಂದಿದ್ದಕ್ಕೆ ಗುಜರಾತ್‍ನ ರಾಜ್‍ಕೋಟ್ ಜಿಲ್ಲಾ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಜಿಲ್ಲ ನ್ಯಾಯಾಲಯದ ನ್ಯಾ.ಎಚ್.ಕೆ.ದವೆ ಅವರು ಗುಜರಾತ್ ಪ್ರಾಣಿ ಸಂರಕ್ಷಣೆ(ತಿದ್ದುಪಡಿ) ಕಾಯ್ದೆ 2017ರ ಅನ್ವಯ ಆರೋಪಿ ಸಲೀಂಗೆ ಶಿಕ್ಷೆ ವಿಧಿಸಿದ್ದಾರೆ.
Advertisement
Advertisement
ಜನವರಿಯಲ್ಲಿ ಸತ್ತರ್ ಕೋಲಿಯಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು. ಆರೋಪಿ ಮಕ್ರಾನಿ ತನ್ನ ಮಗಳ ಮದುವೆ ಹಿನ್ನೆಲೆ ಮನೆಯಲ್ಲಿದ್ದ ಕರುವನ್ನು ಯಾರಿಗೂ ಗೊತ್ತಾಗದಂತೆ ಕೊಂದು ಬಾಡೂಟ ಮಾಡಿಸಿ, ಮದುವೆ ಊಟವನ್ನಾಗಿ ಬಡಿಸಿದ್ದ ಎಂದು ದೂರುದಾರರು ಆರೋಪಿಸಿದ್ದರು.
Advertisement
Advertisement
ಎಫ್‍ಐಆರ್ ದಾಖಲಾದ ನಂತರ ತನಿಖೆ ನಡೆಸಲಾಗಿದ್ದು, ಸಾಕ್ಷಿಗಳು ಹಾಗೂ ವಿಧಿವಿಜ್ಞಾನ ವರದಿಯನ್ನು ಆಧಾರಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ತಿದ್ದುಪಡಿಯಾದ ಕಾಯ್ದೆಯನ್ವಯ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡದ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ತಿದ್ದುಪಡಿ ಮಾಡಿದ ಹೊಸ ಕಾಯ್ದೆಯನ್ವಯ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ. ಈ ಕಾಯ್ದೆಯ ಪ್ರಕಾರ ಗೋಮಾಂಸ ಸಾಗಣೆ, ಮಾರಾಟ ಮತ್ತು ಸಂಗ್ರಹಣೆಗಾಗಿ 7-10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಈ ಹಿಂದೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಕಾಯ್ದೆಯ ತಿದ್ದುಪಡಿ ನಂತರ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಹೆಚ್ಚಿಸಲಾಗಿತ್ತು.