ಚಿಕ್ಕಮಗಳೂರು: ಸತ್ತೇ ಹೋದ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ದಿಢೀರ್ ಪ್ರತ್ಯಕ್ಷವಾಗಿರುವ ಪ್ರಸಂಗವೊಂದು ಜಿಲ್ಲೆಯಲ್ಲಿ ನಡೆದಿದೆ.
ವ್ಯಕ್ತಿಯನ್ನು ಸುರೇಶ್ ಎಂದು ಗುರುತಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಸುರೇಶ್ ಸತ್ತೇ ಹೋಗಿದ್ದಾರೆ ಎಂದು ಅಂದುಕೊಂಡಿದ್ದರೆ, ಇದೀಗ ಏಕಾಏಕಿ ಪ್ರತ್ಯಕ್ಷವಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಪಡಿಸಿದ್ದಾರೆ. ಇದನ್ನೂ ಓದಿ: KRSಗೆ ಕಂಟಕದ ಆತಂಕ – ರೈತರ ಧರಣಿಗೆ ಮಣಿದು ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ತಡೆ
ಜುಲೈ 12 ರಂದು ಚಿಕ್ಕಮಗಳೂರಿನ ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಸುರೇಶ್ ಕೊಚ್ಚಿ ಹೋಗಿದ್ದರು. ರಣ ಮಳೆ ಮಧ್ಯೆಯೂ ಸುರೇಶ್‍ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಶೋಧ ಕಾರ್ಯ ನಡೆಸಿ ಸುಸ್ತಾಗಿ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಇದೀಗ ಘಟನೆ ನಡೆದು 14 ದಿನಗಳ ಬಳಿಕ ಸುರೇಶ್ ದಿಢೀರ್ ಪ್ರತ್ಯಕ್ಷವಾಗಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಸುರೇಶ್ ರಸ್ತೆಯಲ್ಲಿ ಬಿಂದಾಸ್ ಓಡಾಟ ಕಂಡು ಸ್ಥಳೀಯರು ಹಾಗೂ ಅಧಿಕಾರಿಗಳು ದಂಗಾಗಿದ್ದಾರೆ. ಅಲ್ಲದೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ಸುರೇಶ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸತ್ತಿದ್ದಾನೆಂದು ತಿಳಿದಿದ್ದ ವ್ಯಕ್ತಿ ಕಂಡು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.