ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಒಂಟಿಯಾಗಿ ನಿಂತಿದ್ದ ಯುವತಿಗೆ ಕಾಮುಕನೊಬ್ಬ ಬಲವಂತವಾಗಿ ತಬ್ಬಿ ಮುತ್ತು ಕೊಡಲು ಯತ್ನಿಸಿದ ಘಟನೆ ನವಿ ಮುಂಬೈ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಪ್ರಸ್ತುತ ಯುವತಿ ದೂರಿನ ಮೇರೆಗೆ ಕಾಮುಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ನರೇಶ್ ಜೋಷಿ(43) ಎಂದು ತಿಳಿದುಬಂದಿದೆ. ಘಟನೆಯ ಸಂಪೂರ್ಣ ದೃಶ್ಯಗಳು ರೈಲ್ವೇ ಸ್ಟೇಷನ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಏನಿದು ಘಟನೆ: ರೈಲ್ವೇ ನಿಲ್ದಾಣದಲ್ಲಿ ಗುರುವಾರ ಘಟನೆ ನಡೆದಿದೆ. ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಕಾಣಿಸಿದ್ದ ವ್ಯಕ್ತಿಯನ್ನು ಪೊಲೀಸರು ಗಮನಿಸಿದ್ದಾರೆ. ಈ ವೇಳೆ ಆತ ಒಂಟಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಕಂಡ ರೈಲ್ವೇ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಇಂತಹದ್ದೇ ಘಟನೆ ಮುಂಬೈನ ಕಾರ್ಟರ್ ರಸ್ತೆಯಲ್ಲಿ ವರದಿಯಾಗಿತ್ತು. 23 ವರ್ಷದ ಯುವಕ ತನ್ನ ಮಾಜಿ ಗೆಳತಿಗೆ ಸಾರ್ವಜನಿಕವಾಗಿ ಮುತ್ತು ಕೊಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದ. ಘಟನೆ ಕುರಿತು ದೂರು ನೀಡಿದ್ದ ಯುವತಿ ತಾನು ತನ್ನ ಇತರೇ ಗೆಳತಿಯರೊಂದಿಗೆ ತೆರಳುತ್ತಿದ್ದ ಸಮಯದಲ್ಲಿ ಆರೋಪಿ ಬಲವಂತವಾಗಿ ತನಗೆ ಮುತ್ತು ಕೊಡಲು ಯತ್ನಿಸಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ದಾಖಲಿಸಿದ್ದಳು. ಮತ್ತೊಂದು ಪ್ರಕರಣದಲ್ಲಿ ಮುಂಬೈ ಸ್ಥಳೀಯ ಚಲಿಸುತ್ತಿದ್ದ ರೈಲಿನಲ್ಲಿ 18 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಕುರಿತು ಸಂತ್ರಸ್ತೆ ಪೊಲೀಸ್ ಕಮಿಷನರ್ ಗೆ ಟ್ವೀಟ್ ಮಾಡಿ ದೂರು ನೀಡಿದ್ದಳು.
#WATCH: Girl molested at Turbhe railway station in Navi Mumbai yesterday; accused has been arrested after complaint #Maharashtra pic.twitter.com/kwUfFhCZZG
— ANI (@ANI) February 23, 2018