ನವದೆಹಲಿ: ಲಿಫ್ಟ್ ನಲ್ಲಿ ಓಡಾಡುತ್ತಿದ್ದ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರವಿಕಪೂರ್ (30) ಬಂಧಿತ ಆರೋಪಿಯಾಗಿದ್ದು, ದೆಹಲಿಯ ಗುರ್ಗಾಂವ್ ಪ್ರದೇಶದ ನಿವಾಸಿಯಾಗಿದ್ದಾನೆ. ರವಿ ವಾಸಿಸುವ ಪ್ರದೇಶದಲ್ಲಿದ್ದ ಸ್ಟಾರ್ ಟವರ್ ಕಾಂಪ್ಲೆಕ್ಸ್ ಬಳಿಯ ಲಿಫ್ಟ್ ನಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಲಿಫ್ಟ್ ನಲ್ಲಿ ಮಹಿಳೆಯರು ಒಬ್ಬರೇ ಹತ್ತಿದರೆ ಪ್ರತ್ಯಕ್ಷವಾಗುತ್ತಿದ್ದ ಈತ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅಲ್ಲದೇ ಮಹಿಳೆಯರ ಎದುರು ತನ್ನ ದೇಹದ ಭಾಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ನಡೆದಿದ್ದು ಏನು?
ಹಲವು ದಿನಗಳಿಂದ ಲಿಫ್ಟ್ ನಲ್ಲಿ ಓಡಾಡುವ ಒಂಟಿ ಮಹಿಳೆಯ ಟಾರ್ಗೆಟ್ ಮಾಡಿದ್ದ ಈತ ಶುಕ್ರವಾರವೂ ಲಿಫ್ಟ್ ನಲ್ಲಿ ತೆರಳಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಅತಂಕಗೊಂಡ ಮಹಿಳೆ ಸ್ಥಳೀಯರ ಸಹಕಾರದಿಂದ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಕಾಂಪ್ಲೆಕ್ಸ್ ನಲ್ಲಿ ಆಳವಡಿಸಿದ್ದ ಸಿಸಿಟಿವಿ ದೃಶ್ಯ ಪರಿಶೀಲಿಸಿದ ವೇಳೆ ರವಿಕಪೂರ್ ಹಲವು ಬಾರಿ ಲಿಫ್ಟ್ ಬಳಕೆ ಮಾಡಿದ್ದು ದೃಢವಾಗಿದ್ದು, ಘಟನೆ ಬಳಿಕ ಅದೇ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುವ 5 ಮಹಿಳೆಯರು ಆತನ ವಿರುದ್ಧ ದೂರು ನೀಡಿದ್ದಾರೆ. ಅವರಿಗೂ ಕಾಮುಕ ರವಿಕಪೂರ್ ಇದೇ ರೀತಿ ಕಿರುಕುಳ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿ ರವಿಕಪೂರ್ ನನ್ನು ವಶಕ್ಕೆ ಪಡೆದಿರುವ ಗುರ್ಗಾಂವ್ 30ನೇ ಸೆಕ್ಟರ್ ಪೊಲೀಸರು ಕಾಮುಕನ ವಿರುದ್ಧ ಐಪಿಸಿ ಸೆಕ್ಷನ್ 295 (ಅಶ್ಲೀಲ ವರ್ತನೆ), 354-ಎ (ಲೈಂಗಿಕ ಕಿರುಕುಳ), 509 (ಮಹಿಳೆಯರಿಗೆ ಅವಮಾನ) ಮಾಡಿದ ಆರೋಪದಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv