ಚಾಮರಾಜನಗರ: ಬಂಡೀಪುರದಲ್ಲಿ (Bandipura) ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಪಾರಾದವನಿಗೆ ಅರಣ್ಯ ಇಲಾಖೆ (Forest Department) ಶಾಕ್ ಕೊಟ್ಟಿದೆ. ದಾಳಿಯಿಂದ ಬಚಾವ್ ಆದ ನಂಜನಗೂಡಿನ ವ್ಯಕ್ತಿಗೆ ಇಲಾಖೆ 25,000 ರೂ. ದಂಡ ವಿಧಿಸಿದೆ.
ಇಲ್ಲಿಯವರೆಗೂ ಕೂಡ ಕೇರಳ (Kerala) ಮೂಲದ ವ್ಯಕ್ತಿ ಎಂದು ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದರು. ಆದರೆ ಫೋಟೋ ತೆಗೆಯಲು ಹೋಗಿದ್ದ ವ್ಯಕ್ತಿ ನಂಜನಗೂಡಿನ (Nanjanagudu) ಬಸವರಾಜು ಎಂದು ಈಗ ಗೊತ್ತಾಗಿದೆ. ಈತ ಘಟನೆ ಬಳಿಕ ಅರಣ್ಯ ಇಲಾಖೆ ಕಣ್ತಪ್ಪಿಸಿ ಕೇರಳಕ್ಕೆ ಹೋಗಿ ಕರ್ನಾಟಕಕ್ಕೆ ಬಂದಿದ್ದ. ಘಟನೆ ಬಳಿಕ ಮೊಬೈಲ್ ಸ್ವೀಚ್ ಆಫ್ ಮಾಡಿದ್ದ. ಕೊನೆಗೂ ಬಸವರಾಜುನನ್ನು ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ
ಸೆಲ್ಫಿ ಬೇಡ – ಜಾಗೃತಿ ಮೂಡಿಸಿದ ಬಸವರಾಜು!
ಇದೀಗಾ ಬಂಡೀಪುರದ ಅರಣ್ಯ ಇಲಾಖೆ ಅಧಿಕಾರಿಗಳು ಬಸವರಾಜು ಅವರಿಂದ ವಿಡಿಯೋ ಮಾಡಿಸಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಬಸವರಾಜು, ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ಅಲ್ಲಿಂದ ಬರುವಾಗ ಮೋಜು ಮಸ್ತಿಗಾಗಿ ಸೆಲ್ಫಿ, ಫೋಟೋ ತೆಗೆಯಲು ಮುಂದಾಗಿದ್ದೆ. ಈ ವೇಳೆ ಕಾಡಾನೆ ನನ್ನ ಮೇಲೆ ದಾಳಿ ನಡೆಸಿತು. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಫೋಟೋ, ಸೆಲ್ಫಿ ತೆಗೆಯುವ ಕೆಲಸ ಬೇಡ ಎಂದು ಜಾಗೃತಿ ಮೂಡಿಸುವ ಮಾತಾಡಿದ್ದಾನೆ. ಇದನ್ನೂ ಓದಿ: ಮೂಡಿಗೆರೆ | ಹೆಚ್ಚಿದ ಕಾಡಾನೆ ಉಪಟಳ – ಓಡಿಸಲು ಅನುಮತಿ ಇಲ್ಲ ಎಂದ ಅಧಿಕಾರಿಗಳು!