– ಅಂಬುಲೆನ್ಸ್‌ನಲ್ಲಿ ಮೃತದೇಹವೇ ಇರಲಿಲ್ಲ
ಶ್ರೀನಗರ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಯಾವುದೇ ವಾಹನ ಓಡಾಡುತ್ತಿಲ್ಲ. ಈ ನಡುವೆ ವ್ಯಕ್ತಿಯೊಬ್ಬ ತಾನೇ ಮೃತಪಟ್ಟಂತೆ ನಟಿಸಿ ಮನೆಗೆ ಹೋಗಲು ಯತ್ನಿಸಿರುವ ವಿಚಿತ್ರ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.
ಪೂಂಚ್ ಜಿಲ್ಲೆಯ 60 ವರ್ಷದ ಹಕಮ್ ದಿನ್ ಸತ್ತಂತೆ ನಟಿಸಿ ಅಂಬುಲೆನ್ಸ್ ಮೂಲಕ ತನ್ನ ಮನೆಗೆ ತಲುಪಲು ಯತ್ನಿಸಿದ್ದಾನೆ. ಹಕಮ್ ದಿನ್ ಮಾರ್ಚ್ 27 ರಂದು ಗಾಯಗೊಂಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದನು. ಸೋಮವಾರ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಮನೆಗೆ ತೆರಳಲು ಸಾಧ್ಯವಾಗಿರಲಿಲ್ಲ.
ಈ ವೇಳೆ ಹಕಮ್ ತನ್ನ ಆಪ್ತರ ನೆರವಿನಿಂದ ಮನೆಗೆ ತೆರಳಲು ಸುಳ್ಳು ಮರಣ ಪ್ರಮಾಣ ಪತ್ರವನ್ನು ಮಾಡಿಸಿಕೊಂಡಿದ್ದಾನೆ. ನಂತರ ಖಾಸಗಿ ಅಂಬುಲೆನ್ಸ್ ಮೂಲಕ ಮನೆಗೆ ಹೊರಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಶರ್ಮಾ ತಿಳಿಸಿದ್ದಾರೆ.
ಸ್ನೇಹಿತ ಮೊಹಮ್ಮದ್ ಆಶ್ರಫ್ ಆಸ್ಪತ್ರೆಯಲ್ಲಿ ಹಕಮ್ ದಿನ್‍ನನ್ನು ಭೇಟಿ ಮಾಡಿದ್ದನು. ನಂತರ ಪ್ರಮಾಣ ಪತ್ರದಲ್ಲಿ ಅಂಬುಲೆನ್ಸ್ ಚಾಲಕನ ಹೆಸರನ್ನು ಅಬಿದ್ ಹುಸೇನ್ ಎಂದು ಉಲ್ಲೇಖಿಸಲಾಗಿತ್ತು. ಕೊನೆಗೆ ಜಮ್ಮುವಿನಿಂದ ಮೃತದೇಹವನ್ನು ರವಾನಿಸಲಾಗುತ್ತಿದೆ ಎಂದು ಹೇಳುವ ಮೂಲಕ ಎಲ್ಲಾ ಪೊಲೀಸ್ ನಾಕಾಬಂದಿಯನ್ನು ದಾಟಲು ಯಶಸ್ವಿಯಾದರು.
ಅವರ ಗ್ರಾಮಕ್ಕೆ ಇನ್ನೂ ಕೆಲವು ಕಿ.ಮೀ ದೂರದಲ್ಲಿದ್ದಾಗ ಪೊಲೀಸರು ಬುಫ್ಲಿಯಾಜ್‍ನಲ್ಲಿ ಅಂಬುಲೆನ್ಸ್ ತಡೆದು ಪರಿಶೀಲಿಸಿದ್ದಾರೆ. ಅದರೊಳಗೆ ಯಾವುದೇ ಮೃತದೇಹವಿರಲಿಲ್ಲ. ತಕ್ಷಣ ನಾಲ್ವರನ್ನು ಬಂಧಿಸಿ ಅಂಬುಲೆನ್ಸ್ ವಶಪಡಿಸಿಕೊಂಡಿದ್ದಾರೆ. ನಂತರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲರನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರಿಸಿದ್ದಾರೆ.