ಬೆಂಗಳೂರು: ಪ್ರೀತಿಸಿ ಮದುವೆಯಾಗುವಾಗ (Love Marriage) ಆತನಿಗೆ ಎಲ್ಲವೂ ಚೆನ್ನಾಗಿತ್ತು. ಗಂಡು ಮಗು ಬೇಕೆನ್ನುವ ಹಪಾಹಪಿಯಲ್ಲಿ ಮೂರು ಹೆಣ್ಣು ಮಕ್ಕಳನ್ನ ಹೆಂಡ್ತಿ ಹೆತ್ಲು ಅಂತಾ, ಹೆಂಡ್ತಿ ಮಕ್ಕಳನ್ನ ತೊರೆದು ಗಂಡ ಗಾಯಬ್ ಆಗಿದ್ದಾನೆ. ಇತ್ತ ಹಸುಗೂಸು ಸೇರಿ ಮೂರು ಹೆಣ್ಮಕ್ಕಳನ್ನ ಕೈಲಿಟ್ಕೊಂಡು ಮಹಿಳೆ ಗಂಡನಿಗಾಗಿ ಹೋರಾಟ ಮಾಡ್ತಿದ್ದಾರೆ.
ಹೌದು. ಮುಗ್ದ ಹೆಣ್ಣುಮಕ್ಕಳ (Girls Children) ಜೊತೆ ಕೈಯಲ್ಲಿ ಹಸುಗೂಸನ್ನ ಹಿಡ್ಕೊಂಡು ಧರಣಿ ಕೂತಿರುವ ಮಹಿಳೆಯ ಹೋರಾಟ ಆಕೆಯ ಗಂಡನ ವಿರುದ್ಧವೇ. ಮೂರು ಹೆಣ್ಣುಮಕ್ಕಳನ್ನ ಕೈಲಿಟ್ಟು ನನ್ನ ಗಂಡ ಎಸ್ಕೇಪ್ ಆಗಿದ್ದು ನನಗೆ ನ್ಯಾಯ ಕೊಡಿಸಿ ಅಂತಾ ಮಹಿಳೆಯೊಬ್ರು ಮಕ್ಕಳ ಜೊತೆ ಗಂಡನನ್ನ ಹುಡುಕಿಕೊಡಿ ಕಣ್ಣೀರಿಡ್ತಿದ್ದಾಳೆ. ಅಂದ್ಹಾಗೆ ಈ ಘಟನೆ ನಡೆದಿರೋದು ಬಾಗಲೂರು ಪೊಲೀಸ್ ಠಾಣೆ (Bagaluru Police Station) ವ್ಯಾಪ್ತಿಯ ದ್ವಾರಕನಗರದಲ್ಲಿ. ಮಕ್ಕಳ ಜೊತೆ ಏಕಾಂಗಿ ಹೋರಾಟ ಮಾಡ್ತಿರೋ ಮಹಿಳೆ ವರಲಕ್ಷ್ಮಿ ಅಂತಾ.
2014ರಲ್ಲಿ ಇದೇ ದ್ವಾರಕನಗರದ ಫಾರ್ಮಸಿಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಈ ಮಹಿಳೆಯನ್ನ ಅಲ್ಲೇ ಕೆಲಸ ಮಾಡ್ತಿದ್ದ ಹರೀಶ್ ಎಂಬಾತ ಪ್ರೀತಿ ಮಾಡಿ ಮದುವೆ ಆಗಿದ್ದ. ಇಬ್ಬರೂ ಕುಟುಂಬಸ್ಥರನ್ನ ಒಪ್ಪಿಸಿಯೇ ಮದುವೆಯಾಗಿದ್ರು. ಈಕೆ ಆಂಧ್ರ ಮೂಲದವರಾದ್ರೆ ಆತ ರಾಜಸ್ಥಾನದವನು. ಒಪ್ಪಿಗೆಯಿಂದಲೇ ಮದುವೆಯಾಗಿತ್ತು. ವರ್ಷಗಳೂ ಕಳೆದಂತೆ ಒಂದರ ಹಿಂದೆ ಒಂದು ಎರಡು ಹೆಣ್ಣುಮಕ್ಕಳೂ ಆದ್ವು. ಆದ್ರೆ ಪತಿ ಹರೀಶ್‌ಗೆ ಗಂಡು ಮಗು ಬೇಕೆಂಬ ಬಯಕೆ. 3ನೇ ಮಗು ಕೂಡ ತಯಾರಾಗಿತ್ತು. ಆದ್ರೆ ಆ ಮಗು ಕೂಡ ಹೆಣ್ಮಗು ಆಗುತ್ತೆ ಅಂತಾ ಹರೀಶ್ ಮತ್ತೊಂದು ಯುವತಿಯ ಹಿಂದೆ ಬಿದ್ದಿದ್ನಂತೆ.
ಕಳೆದ ಒಂದು ವರ್ಷದಿಂದಲೇ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದಾತನಿಗೆ ಇತ್ತೀಚೆಗೆ ಜನಿಸಿದ 3ನೇಯದ್ದೂ ಹೆಣ್ಣು ಮಗು ಅಂತಾ ಗೊತ್ತಾಗಿದೆ. ಆಗಿಂದ ಮನೆಯ ಕಡೆ ತಲೆಯೇ ಹಾಕಿಲ್ಲ. ಗಂಡ ಆಗ ಬರ್ತಾನೆ ಈಗ ಬರ್ತಾನೆ ಅಂತಾ ಕಾಯ್ತಿದ್ದ ಪತ್ನಿ ಕೊನೆಗೆ ಗಂಡನ ವಿರುದ್ಧ ಈಶಾನ್ಯ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಹೆಣ್ಮಗಳು ಆಯ್ತು ಅಂತಾ ಬೇರೆಯಾಕೆಯನ್ನ ಮದುವೆಯಾಗಿದ್ದಾನೆ.. 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದಾನೆ. ನಾನು ಈಗ ಈ ಮೂರು ಮಕ್ಕಳನ್ನ ನೋಡ್ಕೊಳ್ಳೋದು ಹೇಗೆ? ಈ ಮೆಡಿಕಲ್ ಸ್ಟೋರ್ ನವರೇ ಆತನಿಗೆ ನೀನು ನಮ್ಮೂರೋನು ಈಕೆ ಬೇರೆ ರಾಜ್ಯದಾಕೆ ಆಕೆ ಜೊತೆ ಯಾಕ್ ಜೀವನ ಮಾಡ್ತೀಯಾ ಅಂತಾ ಬೇರೆ ಯುವತಿ ಜೊತೆ ಮದುವೆ ಮಾಡಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.
ಇನ್ನು ಮಹಿಳೆಯ ಆರೋಪಕ್ಕೆ ಮೆಡಿಕಲ್ ಸ್ಟೋರ್ ನ ಅಶೋಕ್, ನನಗೂ ಆರೋಪಿತನಿಗೂ ಯಾವ ಸಂಬಂಧ ಇಲ್ಲ. 2016 ರಲ್ಲಿ ಇಬ್ರೂ ನಮ್ಮ ಫಾರ್ಮಸಿಯಲ್ಲಿ ಕೆಲಸ ಮಾಡ್ತಿದ್ರು. ಪ್ರೀತಿ ಮಾಡಿ ಮದುವೆ ಆಗಿದ್ರು. ನಂತರ ನಮ್ಮ ಫಾರ್ಮಸಿ ಕ್ಲೋಸ್ ಆಯ್ತು. ಆಗಿಂದ ಆತ ನನಗೆ ಸಂಪರ್ಕ ಇಲ್ಲ. ಈಗ ಬಂದು ಹೀಗೆ ಸುಳ್ಳು ಆರೋಪ ಮಾಡ್ತಿದ್ದಾರೆ ನಾನು ಕಾನೂನು ಹೋರಾಟ ಮಾಡ್ತೀನಿ ಅಂತಾ ಹೇಳ್ತಿದ್ದಾರೆ.
ಸದ್ಯ ಸಂತ್ರಸ್ಥೆಯ ಪತಿ ಆತನ ಕುಟುಂಬಸ್ಥರು ಹಾಗೂ ಮೆಡಿಕಲ್ ಸ್ಟೋರ್ ನ ಅಶೋಕ್ ಸೇರಿ ಒಟ್ಟು ಏಳು ಜನರ ವಿರುದ್ಧ ಈಶಾನ್ಯ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗಿ ಒಂದು ತಿಂಗಳಾದ್ರೂ ಪೊಲೀಸ್ರು ನ್ಯಾಯ ಕೊಡಿಸಿಲ್ಲ ಅವರ ಫ್ಯಾಮಿಲಿ ಇಂದ ಹಣ ಈಸ್ಕೊಂಡು ಸುಮ್ಮನಾಗಿದ್ದಾರೆ ಅಂತಾ ಆರೋಪಿಸ್ತಿದ್ದಾರೆ. ಮಾಧ್ಯಮಗಳ ವರದಿ ಇಂದಾದ್ರು ಪೊಲೀಸ್ರು ಈಕೆಗೆ ನ್ಯಾಯ ಕೊಡಿಸಬೇಕಿದೆ.



