ಲಂಡನ್: ಇಸ್ಕಾನ್ (ISKCON) ರೆಸ್ಟೋರೆಂಟ್‌ಗೆ ವ್ಯಕ್ತಿಯೊಬ್ಬ ಚಿಕನ್ (Chicken) ತಂದು ತಿಂದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಲಂಡನ್‌ನಲ್ಲಿರುವ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ಗೋವಿಂದ ರೆಸ್ಟೋರೆಂಟ್ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ. ಈ ರೆಸ್ಟೋರೆಂಟ್ ಒಳಗೆ ಪ್ರವೇಶಿಸಿ ವ್ಯಕ್ತಿಯೊಬ್ಬ ಫ್ರೈಡ್ ಚಿಕನ್ ತಿನ್ನುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಹೊತ್ತಿಸಿದೆ.
ವೈರಲ್ ಆಗಿರುವ ಈ ವೀಡಿಯೊದಲ್ಲಿ, ಆಫ್ರಿಕನ್-ಬ್ರಿಟಿಷ್ ಮೂಲದ ವ್ಯಕ್ತಿಯೊಬ್ಬ ಇಸ್ಕಾನ್‌ನ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದದ ಆವರಣಕ್ಕೆ ಪ್ರವೇಶಿಸಿ, ಇಲ್ಲಿ ಮಾಂಸಾಹಾರ ಸಿಗುತ್ತಾ ಎಂದು ಕೇಳುತ್ತಿರುವುದು ಕಂಡುಬಂದಿದೆ.
ನಮ್ಮ ರೆಸ್ಟೋರೆಂಟ್‌ನಲ್ಲಿ ಮಾಂಸ, ಈರುಳ್ಳಿ ಅಥವಾ ಬೆಳ್ಳುಳ್ಳಿ ಸಿಗಲ್ಲ ಎಂದು ಸಿಬ್ಬಂದಿ ತಿಳಿಸಿದಾಗ, ಆತ ಕೆಎಫ್‌ಸಿ ಚಿಕನ್ ಬಾಕ್ಸ್ ತೆಗೆದು ರೆಸ್ಟೋರೆಂಟ್ ಒಳಗೆ ತಿನ್ನಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡು ಸಿಬ್ಬಂದಿ ಅರೆಕ್ಷಣ ಆವಕ್ಕಾಗಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಗ್ರಾಹಕರೊಬ್ಬರು, ಕ್ಷಮಿಸಿ, ನೀವು ಮಾಡುತ್ತಿರುವುದು ಈ ಸ್ಥಳದ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇದು ನ್ಯಾಯಯುತವಲ್ಲ ಎಂದು ಹೇಳುತ್ತಾನೆ. ಆದಾಗ್ಯೂ, ಭದ್ರತಾ ಸಿಬ್ಬಂದಿಯನ್ನು ಕರೆಯುವವರೆಗೂ ಆ ವ್ಯಕ್ತಿ ಚಿಕನ್ ತಿನ್ನುವುದನ್ನು ಮುಂದುವರಿಸುತ್ತಾನೆ. ಕೊನೆಗೆ ಆತನನ್ನು ರೆಸ್ಟೋರೆಂಟ್‌ನಿಂದ ಹೊರಗೆ ಹಾಕಲಾಗುತ್ತದೆ.
ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯವು ಜನಾಂಗೀಯ ಪ್ರೇರಿತವಾಗಿದೆಯೇ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಗುರಿಯನ್ನು ಹೊಂದಿದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ವೀಡಿಯೋ ಇತ್ತೀಚಿನದ್ದೇ ಎಂಬುದು ದೃಢವಾಗಿಲ್ಲ.