ಬೆಂಗಳೂರು: ರಾಜಕಾಲುವೆ ಕಾಮಗಾರಿಯ ವೇಳೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತ ದುರ್ದೈವಿ ಕಾರ್ಮಿಕನನ್ನು 27 ವರ್ಷದ ಮಡಿವಾಳಪ್ಪ ಗೌಡ ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಆಲಗಡಲಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮಡಿವಾಳಪ್ಪ ಇಲ್ಲಿ ಕೆಲಸ ಮಾಡುತ್ತಿದ್ದು, ಇಂದು ಈ ಅವಘಡಕ್ಕೆ ಬಲಿಯಾಗಿದ್ದಾರೆ.
ಅವಘಡವೇನು..?
ರಾಜರಾಜೇಶ್ವರಿ ನಗರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಬಿಡಬ್ಲ್ಯುಎಸ್‍ಎಸ್‍ಬಿ ಛೇಂಬರ್ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗಾಗಿ ಮೂವರು ಕಾರ್ಮಿಕರು ರಾಜಕಾಲುವೆಗೆ ಇಳಿದಿದ್ದಾರೆ. ಈ ವೇಳೆ ಮೂವರ ಮೇಲೆಯೂ ಮಣ್ಣು ಕುಸಿದಿದೆ. ಕೂಡಲೇ ಇಬ್ಬರನ್ನು ಸ್ಥಳೀಯರು ಮೇಲೆತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಆದ್ರೆ ಒಬ್ಬರು ಮಣ್ಣಿನಡಿ ಸಿಲುಕಿದ್ದಾರೆ.
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಕಾರ್ಯಾಚರಣೆ ನಡೆಸಿದೆ. ಜೆಸಿಬಿ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಕೈ ಕಾಣಿಸಿದ ಹಿನ್ನೆಲೆಯಲ್ಲಿ ದೇಹವನ್ನು ಹೊರಗೆಳೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv