ಆನೇಕಲ್: ಹಿಟ್ & ರನ್‌ನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹ ಸುಮಾರು 11 ಗಂಟೆಗಳ ಕಾಲ ರಸ್ತೆಯಲ್ಲೆ ಬಿದ್ದಿದ್ದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಹಳೆ ಚಂದಾಪುರ ಗ್ರಾಮದ ಬಳಿ ನಡೆದಿದೆ.
ಬೆಂಗಳೂರು – ಹೊಸೂರು ರಾಷ್ಟ್ರೀಯ ಹೆದ್ದಾರಿಯ ಹಳೆಯ ಚಂದಾಪುರ ಸಮೀಪ ಬುಧವಾರ ಬೆಳಗ್ಗೆ 9:00ರ ಸಮಯದಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗಬೇಕಾದರೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಅದಾದ ನಂತರ ವ್ಯಕ್ತಿ ಅಲ್ಲಿಯೇ ಕೆಳಗೆ ಬಿದ್ದು, ಸಾವನ್ನಪ್ಪಿದ್ದರು. ರಾತ್ರಿ 9:00ರ ವರೆಗೂ ಅವರ ಶವ ಅಲ್ಲೇ ಬಿದ್ದಿತ್ತು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಿಟ್ & ರನ್‌ಗೆ ಪತಿ ಬಲಿ – ಪತ್ನಿ ಪ್ಲ್ಯಾನ್‌ನಂತೆ ನಡೀತು ಕೊಲೆ
ಬೆಳಗ್ಗೆ ಕಚೇರಿಗೆ ಹೋಗಬೇಕಾದರೆ ಅಪಘಾತವಾಗಿದ್ದನ್ನು ನೋಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹತಿ ನೀಡಿದವರು ಕಚೇರಿ ಕೆಲಸ ಮುಗಿಸಿ ವಾಪಸ್ ಬಂದಾಗ ವ್ಯಕ್ತಿ ಮೃತದೇಹ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಕಂಡು ಕೂಡಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಅದಾದ ನಂತರ ಸೂರ್ಯ ನಗರ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿ ಜೇವರ್ಗಿ ಮೂಲದ ಮಲಕಣ್ಣ ಎಂದು ತಿಳಿದುಬಂದಿದೆ. ಅಪಘಾತದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಗುಂಡಿಟ್ಟು ಆಪ್ ನಾಯಕನ ಹತ್ಯೆ

