ದಾವಣಗೆರೆ: ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಎಮ್ಮೆ ಮಾಲೀಕನನ್ನು ಕೋಣವೊಂದು (Buffalo) ಇರಿದು ಕೊಂದಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಎನ್ ಬಸವನಹಳ್ಳಿ (N basavanahalli) ಗ್ರಾಮದಲ್ಲಿ ನಡೆದಿದೆ.
ಎನ್ ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಕೋಣದ ದ್ವೇಷಕ್ಕೆ ಬಲಿಯಾದ ಎಮ್ಮೆ ಮಾಲೀಕ. ಲಿಂಗದಹಳ್ಳಿ ಗ್ರಾಮದ ಉಡುಸಲಾಂಭ ದೇವಿಗೆ ಬಿಟ್ಟ ಕೋಣ ಪಕ್ಕದ ಎನ್ ಬಸವನಹಳ್ಳಿಯ ಎಮ್ಮೆಗಳ ಜೊತೆ ಸೇರಿ ದಾಂಧಲೆ ಮಾಡುತ್ತಿತ್ತು. ಅಡಿಕೆ ತೋಟಗಳನ್ನು ಕೂಡ ಹಾಳು ಮಾಡಿತ್ತು. ಈ ವೇಳೆ ತನ್ನ ಎಮ್ಮೆಗಳ ಜೊತೆ ಸೇರಲು ಬಂದರೆ ಜಯಣ್ಣ ದೊಣ್ಣೆಯಿಂದ ಹೊಡೆದು ಪುಂಡ ಕೋಣವನ್ನು ಓಡಿಸುತ್ತಿದ್ದರು. ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸಿತ್ತು. ಆತನ ಮೇಲೆ 3-4 ಬಾರಿ ದಾಳಿಯೂ ಮಾಡಿತ್ತು. ಜಯಣ್ಣ ಹಿಂದೆ ದಾಳಿಯಿಂದ ಪಾರಾಗಿದ್ದರು.
ದುರಂತ ಎಂದರೆ ಕಳೆದ ದಿನ ಸಂಜೆ ಯಾರು ಇಲ್ಲದ್ದನ್ನು ನೋಡಿ ಕೋಣ ಜಯಣ್ಣನ ಮೇಲೆ ಮನಸೋ ಇಚ್ಚೆ ದಾಳಿ ಮಾಡಿ ಕೊಂದಿದೆ. ಜಯಣ್ಣನನ್ನು ಸಾಯಿಸಿದ ಕೋಣವನ್ನು ಎನ್ ಬಸವನಹಳ್ಳಿ ಗ್ರಾಮಸ್ಥರು ಕಟ್ಟಿ ಹಾಕಿ ಜಯಣ್ಣ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ. ಮೃತ ಜಯಣ್ಣನವರ ಪುತ್ರ ದೂರು ನೀಡಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೋಲಿಸರು ಕೋಣವನ್ನು ವಶಕ್ಕೆ ಪಡೆದು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ
ಲಿಂಗದಹಳ್ಳಿ ಗ್ರಾಮದ ಉಡುಸಲಾಂಭ ದೇವಿಗೆ ಬಿಟ್ಟಿರುವ ಕೋಣ ಎನ್ ಬಸವನಹಳ್ಳಿಯಲ್ಲಿ ಹಲವು ದಿನಗಳಿಂದ ತಿರುಗಾಡುತ್ತಿತ್ತು. ಈಗಾಗಲೇ 7-8 ಜನರ ಮೇಲೆ ದಾಳಿ ಮಾಡಿರುವ ಕೋಣದ ಬಗ್ಗೆ ಲಿಂಗದಹಳ್ಳಿ ದೇವಸ್ಥಾನದ ಕಮಿಟಿಯ ಗಮನಕ್ಕೆ ತರಲಾಗಿತ್ತು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಬಳಿಕ ಎನ್ ಬಸವನಹಳ್ಳಿ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ನಿರ್ಲಕ್ಷ್ಯವೇ ಜಯಣ್ಣನ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಿಂದ ಹಾರಿದ ಸ್ವದೇಶಿ ತಪಸ್ ಯುಎವಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್