– ಹಣ ಪಡೆದು ವಾಪಸ್ ಕೊಡದೇ ಸತಾಯಿಸುತ್ತಿದ್ದವನ ಮನೆ ಮುಂದೆಯೇ ಆತ್ಮಹತ್ಯೆ
ಮಡಿಕೇರಿ: ಕಷ್ಟದ ಸಮಯದಲ್ಲಿ ಕೊಟ್ಟ ಹಣವನ್ನು ವಾಪಸ್ ಕೊಡದೇ ಇದ್ದಿದ್ದಕ್ಕೆ ಕೊಡಗಿನ ಉದ್ಯಮಿಯೊಬ್ಬರು ಮನನೊಂದು ಕೇರಳದಲ್ಲಿರುವ ಸಾಲ ಪಡೆದಿದ್ದ ವ್ಯಕ್ತಿಯ ಮನೆ ಮುಂದೆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಂಡತಿ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಪೊನ್ನಂಪೇಟೆಯ ಕುಟ್ಟ ಗ್ರಾಮದ ನಜೀರ್ ಆತ್ಮಹತ್ಯೆಗೆ ಶರಣಾದವರು. ಕೇರಳದ ವಯನಾಡು ಮೂಲದ ಬಾಪು ಎಂಬ ವ್ಯಕ್ತಿಗೆ ನಜೀರ್ ಸಾಲ ಕೊಟ್ಟಿದ್ದರು. ಆದರೆ ಅವರು ವಾಪಸ್ ಕೊಡದಿದ್ದಕ್ಕೆ ಮನನೊಂದು ಹೆಂಡತಿ ಮೂವರು ಮಕ್ಕಳೊಂದಿಗೆ ಕಾರಿನಲ್ಲಿ ಕುಳಿತು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇದನ್ನೂ ಓದಿ: 20 ರೂ. ಲಂಚದ ಆರೋಪ; 30 ವರ್ಷ ಜೈಲು ಅನುಭವಿಸಿದ್ದ ವ್ಯಕ್ತಿ ನಿರಪರಾಧಿ ಅಂತ ತೀರ್ಪು ಬಂದ ಮರುದಿನವೇ ಸಾವು
ಅಕ್ಕಪಕ್ಕದ ಜನರು ಕಾರಿನಲ್ಲಿದ್ದ ಉದ್ಯಮಿಯ ಪತ್ನಿ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳೆಗೆ 22% ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಮೂವರು ಮಕ್ಕಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಮಕ್ಕಳಿಗೆ ಮಾನಂತವಾಡಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯನ್ನು ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ನಜೀರ್ ಫೇಸ್‌ಬುಕ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಆತ್ಮಹತ್ಯೆಗೆ ಬಾಪು ಕಾರಣ ಎಂದು ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಮಾನಂತವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾಸನ | ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು

