ಕಲಬುರಗಿ: ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಹರಿದು ಪಾದಚಾರಿ ಸಾವನ್ನಪ್ಪಿದ ಘಟನೆ ಜಿಲ್ಲೆ ಚಿತ್ತಾಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ.
ರಸ್ತೆ ದಾಟುವಾಗ ಮಲಕಪ್ಪ ಎಂಟಮನೆ ಅವರಿಗೆ ಬಸ್ ಡಿಕ್ಕಿಯಾಗಿದ್ದು, ಪರಿಣಾಮ ಮಲಕಪ್ಪ ಸಾವನ್ನಪ್ಪಿದ್ದರು. ಇದರಿಂದ ಉದ್ರಿಕ್ತಗೊಂಡ ಜನರು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರ ಉಪಸ್ಥಿತಿಯಲ್ಲಿಯೇ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನು ಕೆಲವರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ಸನ್ನು ಜಖಂಗೊಳಿಸಿದ್ದಾರೆ.
ಬಸ್ ಡ್ರೈವರ್ ಸಾರ್ವಜನಿಕರನ್ನು ಹೊಡೆಯದಂತೆ ಕೈ ಮುಗಿದು ಬೇಡಿಕೊಂಡಿದ್ದು, ಪೊಲೀಸರು ಉದ್ರಿಕ್ತರಿಂದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಪಾದಾಚಾರಿ ಸಾವನ್ನಪ್ಪಿದ್ದು ನಿಜ, ಇದರಿಂದ ಬದುಕಿರುವ ಈತನನ್ನು ಸಾಯಿಸುತ್ತಿರಾ ಎಂದು ಪ್ರಶ್ನೆ ಮಾಡಿ ಪೊಲೀಸರು ಜನರಿಗೆ ಸಮಾಧಾನ ಪಡಿಸಿದ್ದಾರೆ. ಈ ಕುರಿತು ಶಹಾಬಾದ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.