ಹೈದರಾಬಾದ್: ತನ್ನ ಕಿರುಕುಳಕ್ಕೆ ಪತ್ನಿ ದೂರವಾದಳು ಎಂದು ಖಿನ್ನತೆಗೆ ಒಳಗಾದ ವ್ಯಕ್ತಿ ಹುಸಿ ಬಾಂಬ್ ಕರೆ (Fake Bomb Threat Call) ಮಾಡಿದ್ದು, ಆತನನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಹಾಕಿದ್ದಕ್ಕೆ ಹೈದರಾಬಾದ್‌ನ (Hyderabad) ಸ್ಥಳೀಯ ನ್ಯಾಯಾಲಯ ಆತನಿಗೆ 18 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ವರದಿಗಳ ಪ್ರಕಾರ ಆರೋಪಿ ಸಂತೋಷನಗರದ ಮೊಹಮ್ಮದ್ ಅಕ್ಬರ್ ಖಾನ್ ತನ್ನ ಪತ್ನಿ ತನ್ನನ್ನು ಬಿಟ್ಟು ತವರುಮನೆಗೆ ಹೋಗಿದ್ದಕ್ಕೆ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದಾನೆ. ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಮಂದಿರ-ಮಸೀದಿ ಜಂಕ್ಷನ್ ಬಳಿ ಬಾಂಬ್ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ತಕ್ಷಣ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳವನ್ನು ತೆರವುಗೊಳಿಸಿ ತಪಾಸಣೆ ಆರಂಭಿಸಿದ್ದಾರೆ. ಒಂದೆರಡು ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ. ಇದನ್ನೂ ಓದಿ: ಇಳಿಯ ವಯಸ್ಸಿನಲ್ಲಿ ಸಪ್ತಪದಿ ತುಳಿದ ನವಜೋಡಿ – ಪತ್ನಿಯ ಅಕ್ಕನಿಗೆ ಬಾಳು ಕೊಟ್ಟ ಮಾಜಿ ಮೇಯರ್
ಅದೇ ರಾತ್ರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ರಕ್ತದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿರುವುದನ್ನು ಅಧಿಕಾರಿಗಳು ತಿಳಿದು, ಆತ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಪೂರ್ವಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ದಂಪತಿಯ ನಡುವಿನ ಭಿನ್ನಾಭಿಪ್ರಾಯದಿಂದ 4 ದಿನಗಳ ಹಿಂದೆ ಆರೋಪಿಯ ಪತ್ನಿ ಮಗಳನ್ನು ಕರೆದುಕೊಂಡು ಚೌಟುಪ್ಪಲ್‌ನ ಬಂಗಾರಿಡದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು. ಖಾನ್ ಕಿರುಕುಳಕ್ಕೆ ಬೇಸತ್ತ ಪತ್ನಿ ಮನವೊಲಿಸಿದರೂ ಹಿಂದಿರುಗಲು ನಿರಾಕರಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ವ್ಯಕ್ತಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೈತರ ಅಹೋರಾತ್ರಿ ಧರಣಿಗೆ ಸುಮಲತಾ ಅಂಬರೀಶ್ ಬೆಂಬಲ