ರಾಮನಗರ: ನೀರು ಕುಡಿಯಲು ಹೋಗಿ ಕಾಲು ಜಾರಿ ಕಟ್ಟೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತ ಗ್ರಾಮದಲ್ಲಿ ನಡೆದಿದೆ.
ಮಾಗಡಿಯ ಅತ್ತಿಂಗೆರೆ ಸಮೀಪದ ಮತ್ತ ಗ್ರಾಮದ ರಮೇಶ್ ಮೃತ ದುರ್ದೈವಿ. ರಮೇಶ್ ನೀರು ಕುಡಿಯಲೆಂದು ಕಟ್ಟೆಯ ಬಳಿ ತೆರಳಿದ್ದರು. ಈ ವೇಳೆ ರಮೇಶ್ ಕಾಲು ಜಾರಿ ಕಟ್ಟೆಯ ಒಳಗೆ ಬಿದ್ದಿದ್ದಾರೆ. ಸುಮಾರು 15 ಅಡಿಯಷ್ಟು ಆಳವಿರುವ ಹಾಗೂ ಕಲ್ಲಿನಿಂದಲೇ ಆವೃತ್ತವಾಗಿರುವ ಕಟ್ಟೆಯಿಂದ ಮೇಲೆ ಬರಲಾಗದೇ ಮುಳುಗಿ ಮೃತಪಟ್ಟಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದವರು ಫೋನ್ ಮಾಡಿ ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹಕ್ಕಾಗಿ ಹುಡುಕಾಡಿದ್ದಾರೆ. ಕೊನೆಗೆ ರಮೇಶ್ ಮೃತದೇಹ ಸಿಕ್ಕಿದ್ದು, ಸ್ಥಳದಲ್ಲಿ ಮೃತ ರಮೇಶ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.