ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ವಿಪರೀತವಾಗಿದೆ. ಮರಳುಗಾರಿಕೆ ಸ್ಥಗಿತವಾಗಿ ಕೂಲಿ, ಕಟ್ಟಡ ನಿರ್ಮಾಣ, ವ್ಯವಹಾರಗಳೆಲ್ಲಾ ಸ್ತಬ್ಧವಾಗಿದೆ. ಈ ನಡುವೆ 6 ಲಕ್ಷ ರೂಪಾಯಿ ಸಾಲ ಮಾಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಮರಳಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದ ಹೆಜಮಾಡಿಯ ನಿವಾಸಿ ಮಹಮ್ಮದ್ ಹನೀಫ್(42) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Advertisement
Advertisement
ಕಾಪು ತಾಲೂಕು ಹೆಜಮಾಡಿಯ ಎಸ್‍ಎಸ್ ರೋಡ್ ನ ಹನೀಫ್, 6 ಲಕ್ಷ ರೂಪಾಯಿ ಸಾಲ ಮಾಡಿ ಎರಡು ನಾಡದೋಣಿ ಖರೀದಿಸಿದ್ದರು. ನದಿ ಬದಿ ಮರಳು ತೆಗೆಯಲು ಧಕ್ಕೆ ನಿರ್ಮಿಸಿದ್ದರು. ಮರಳುಗಾರಿಕೆ ಸಂಪೂರ್ಣ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಉದ್ವೇಗಕ್ಕೆ ಒಳಗಾಗಿ ಹನೀಫ್ ಹೃದಯಾಘಾತಕ್ಕೊಳಗಾಗಿ ಸರ್ಕಾರಿ ಆಸ್ಪತ್ರೆ ಸೇರಿದ್ದರು. ಅಲ್ಲಿಂದ ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹನೀಫ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ರಾತ್ರಿ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
Advertisement
Advertisement
ಮೃತ ಹನೀಫ್ ಗೆ 3 ಮಕ್ಕಳಿದ್ದು, ಒಬ್ಬ ಮಗಳಿಗೆ ಮದುವೆ ಮಾಡಲು ಹನೀಫ್ ಸಿದ್ಧತೆ ಮಾಡಿಕೊಂಡಿದ್ದರು. ಪತ್ನಿ ಜೊತೆ ಬಾಡಿಗೆ ಮನೆಯಲ್ಲಿದ್ದು, ಹನೀಫ್ ಮರಳುಗಾರಿಕೆಗೆ ಅವಕಾಶಕ್ಕೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ನಿರಂತರ ಭಾಗಿಯಾಗಿದ್ದರು. ತಮ್ಮ ಮರಳು ಧಕ್ಕೆ ಸೂಕ್ಷ್ಮ ಪ್ರದೇಶದಲ್ಲಿದೆ ಎಂಬ ಅಧಿಕಾರಿಗಳ ಹೇಳಿಕೆಯಿಂದ ಹನೀಫ್ ಕುಸಿದು ಹೋಗಿದ್ದರು. ಪ್ರತಿಭಟನೆಯಲ್ಲಿ ಇದ್ದಾಗಲೇ ಎದೆನೋವು ಬಂದಿತ್ತು.
ಸಾಲಗಾರರ ಒತ್ತಡಕ್ಕೂ ಹನೀಫ್ ಬೇಸತ್ತಿದ್ದರು ಎನ್ನಲಾಗಿದೆ. ಉದ್ಯೋಗ ಇಲ್ಲದೆ ಉದ್ವೇಗದಿಂದ ಹನೀಫ್ ಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಹನೀಫ್ ಕುಟುಂಬಕ್ಕೆ ಸರ್ಕಾರ, ಜಿಲ್ಲಾಡಳಿತ ಕೂಡಲೇ ಪರಿಹಾರ ಕೊಡಬೇಕೆಂದು ಒತ್ತಾಯ ಕೇಳಿಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv